Site icon TUNGATARANGA

ಹೊಳೆಹೊನ್ನೂರು: ಹಸು ಮೇಯಿಸುತ್ತಿದ್ದ ಮಹಿಳೆಯ ಸರ ಅಪಹರಣ/ ಇಬ್ಬರು ಆರೋಪಿಗಳ ಬಂಧನ

ಹೊಳೆಹೊನ್ನೂರು,ಜು.22:
ರಸ್ತೆಯಲ್ಲಿ ಹಸುಗಳನ್ನು ಮೇಯಿಸುತ್ತಿದ್ದ ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯದ ಸರವನ್ನು ಆಪಹರಿಸಿದ ಇಬ್ಬರನ್ನು ಹೊಳೆಹೊನ್ನೂರು ಪೊಲೀಸರು ಪತ್ತೆ ಹಚ್ಚಿ ಬಂಧಿಸಿರುವ ಘಟನೆ ನಡೆದಿದೆ.


ಸಮಗ್ರ ವಿವರ:
ದಿನಾಂಕಃ 05-07-2023 ರಂದು ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರೆದೊಟ್ಲು ಗ್ರಾಮದ ವಾಸಿ ಮಹಿಳೆಯೊಬ್ಬರು ಅರೆದೊಟ್ಲು ಗ್ರಾಮದ ಬಸ್ ನಿಲ್ದಾನದ ಬಳಿ ಹಸುಗಳನ್ನು ಮೇಯಿಸುತ್ತಿದ್ದಾಗ, ಯಾರೋ ಅಪರಿಚಿತರು ಬಂದು ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0170/2023 ಕಲಂ 392 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.


ಸದರಿ ಪ್ರರಕಣದಲ್ಲಿ ಆರೋಪಿತರ ಪತ್ತೆ ಬಗ್ಗೆ ಜಿ. ಕೆ. ಮಿಥುನ್ ಕುಮಾರ್ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಜಿತೇಂದ್ರ ಕುಮಾರ್ ದಯಾಮ, ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರು ಭದ್ರಾವತಿ ಉಪವಿಭಾಗ ರವರ ಮೇಲ್ವಿಚಾರಣೆಯಲ್ಲಿ, ಹೊಳೆಹೊನ್ನೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಲಕ್ಷ್ಮೀಪತಿರವರ ನೇತೃತ್ವದಲ್ಲಿ, ಪಿಎಸ್ಐ ಸುರೇಶ್, ರಮೇಶ್, ಮತ್ತು ಸಿಬ್ಬಂಧಿಗಳಾದ ಹೆಚ್.ಸಿ ಲಿಂಗೇಗೌಡ, ಮಂಜುನಾಥ, ಪಿಸಿ ವಿಶ್ವನಾಥ, ಚಂದ್ರ ಶೇಖರ್, ಪೇಪರ್ ಟೌನ್ ಪೊಲೀಸ್ ಠಾಣೆಯ ಹೆಚ್.ಸಿ ನಾಗರಾಜ್ ಮತ್ತು ಜಿಲ್ಲಾ ಪೊಲೀಸ್ ಕಛೇರಿ ಎ.ಎನ್.ಸಿ ವಿಭಾಗದ ಸಿಬ್ಬಂದಿಗಳಾದ ಇಂದ್ರೇಶ್, ಗುರುರಾಜ್ ಮತ್ತು ವಿಜಯ್ ಕುಮಾರ್ ರವರುಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.


ಸದರಿ ತನಿಖಾ ತಂಡವು ದಿನಾಂಕಃ 21-07-2023 ರಂದು ಪ್ರಕರಣದ ಆರೋಪಿತರಾದ 1)ಹೇಮಂತ @ ಸತೀಶ್, 32 ವರ್ಷ, ಹೊಸಮನೆ ಭದ್ರಾವತಿ ಮತ್ತು 2) ಜೀವನ್ @ ದಮ್ಮು, 23 ವರ್ಷ, ಹಾಲಪ್ಪ ಸರ್ಕಲ್ ಭದ್ರಾವತಿ ರವರುಗಳನ್ನು ದಸ್ತಗಿರಿ ಮಾಡಿ, ಸದರಿ ಆರೋಪಿತರಿಂದ ಹೊಳೆಹೊನ್ನೂರು ಪೊಲೀಸ್ ಠಾಣೆಯ 01 ಸುಲಿಗೆ ಪ್ರಕರಣ ಮತ್ತು ತುಮಕೂರಿನ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯ 01 ಬೈಕ್ ಕಳ್ಳತನ ಪ್ರಕರಣ ಸೇರಿದಂತೆ ಒಟ್ಟು 02 ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 75,000/- ರೂಗಳ 23 ಗ್ರಾಂ ಬಂಗಾರದ ಮಾಂಗಲ್ಯ ಸರ ಮತ್ತು ಅಂದಾಜು ಮೌಲ್ಯ 25,000/- ರೂಗಳ ಬೈಕ್ ಸೇರಿ ಒಟ್ಟು 1,00,000/- ರೂ ಮೌಲ್ಯದ ಮಾಲನ್ನು ಅಮಾನತ್ತು ಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Exit mobile version