ಶಿವಮೊಗ್ಗ: ಬಾಪೂಜಿ ನಗರದಲ್ಲಿರುವ ರಾಜಕಾಲುವೆ ಸಾಮರ್ಥ್ಯ ಹೆಚ್ಚಿಸಲು ಆಗ್ರಹಿಸಿ ಪಾಲಿಕೆ ಸದಸ್ಯೆ ಸುರೇಖಾ ಮುರಳೀಧರ್ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಇಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ವಾರ್ಡ್ ನಂ. ೧೨ ರ ಬಾಪೂಜಿ ನಗರದಲ್ಲಿ ಇರುವ ರಾಜಕಾಲುವೆ ಸಾಗರ ರಸ್ತೆಯಿಂದ ಆರಂಭವಾಗಿ ಗಾರ್ಡನ್ ಏರಿಯಾ, ಗಾಂಧಿ ಪಾರ್ಕ್ ಮೂಲಕ ಬಾಪೂಜಿ ನಗರ ಸೇರುತ್ತದೆ. ಮಳೆಗಾಲದಲ್ಲಿ ೧೦ ನಿಮಿಷ ಮಳೆ ಬಂದರೆ ಸಾಕು ಈ ಕಾಲುವೆ ತುಂಬಿ ಹರಿಯುತ್ತದೆ.
ಸುತ್ತಮುತ್ತಲ ಬಡಾವಣೆಗಳಾದ ತಿಲಕ್ ನಗರ, ದುರ್ಗಿಗುಡಿ, ಸ್ಟೇಡಿಯಂ, ಜಯನಗರ ಪ್ರದೇಶದ ಚರಂಡಿ ನೀರು ಈ ರಾಜಕಾಲುವೆಗೆ ಬಂದು ಸೇರುತ್ತದೆ. ಆದರೆ, ಈ ಕಾಲುವೆ ಸುಮಾರು ೨.೫ ಮೀಟರ್ ಮಾತ್ರ ಇದೆ. ಇದರಿಂದ ನೀರು ಬಾಪೂಜಿ ನಗರ ಮತ್ತು ಟ್ಯಾಂಕ್ ಮೊಹಲ್ಲಾದ ಮನೆಗಳಿಗೆ ನೇರವಾಗಿ ನುಗ್ಗುತ್ತದೆ ಎಂದು ಮನವಿದಾರರು ತಿಳಿಸಿದರು.
ಈ ರಾಜಕಾಲುವೆ ಅಳತೆ ಕೂಡ ತುಂಬಾ ಕಿರಿದಾಗಿದೆ. ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸದರಿ ಕಾಲುವೆಯ ಸಾಮರ್ಥ್ಯ ಹೆಚ್ಚಿಸಿ ವಿವಿಧ ಬಡಾವಣೆಗಳಿಂದ ಬಂದ ನೀರು ಸರಾಗವಾಗಿ ಹೋಗಲು ವ್ಯವಸ್ಥೆ ಮಾಡಬೇಕು. ಅಥವಾ ಗಾಂಧಿ ಪಾರ್ಕ್ ಹತ್ತಿರ ತಿಲಕ್ ನಗರ, ದುರ್ಗಿಗುಡಿ, ಜಯನಗರ ಪ್ರದೇಶದ ನೀರು ಸದರಿ ರಾಜಕಾಲುವೆಗೆ ಸೇರದಂತೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಮುಖರಾದ ಟಿ.ಎಸ್. ಗುರುಮೂರ್ತಿ, ರಾಜಣ್ಣ, ಸರೋಜಮ್ಮ, ರಶ್ಮಿ ಶಿವಕುಮಾರ್, ಶಿವಪ್ರಸಾದ್, ಅಣ್ಣಯ್ಯ, ಪ್ರದೀಪ್, ನಾಗಮ್ಮ, ರಂಗನಾಥ್ ಮತ್ತಿತರರು ಇದ್ದರು.