ಶಿವಮೊಗ್ಗ, ನ.04: ಮಹಿಳೆಯೊಬ್ಬರಿಂದ ಚಿನ್ನಾಭರಣ ಕಸಿದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಸರಗಳ್ಳರನ್ನು ಪೊಲೀಸರು ಬುಧವಾರ ಬಂಧಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಶಿಕಾರಿಪುರ ಉಪ-ವಿಭಾಗದ ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ತೊಗರ್ಸಿ ಗ್ರಾಮದ ವಾಸಿ ಬಸಮ್ಮ ಎಂಬುವವರು ಅಕ್ಟೋಬರ್ 22 ರಂದು ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವಾಪಾಸ್ ಬರುತ್ತಿರುವಾಗ ಎರಡು ಜನ ಅಪರಿಚಿತರು ಆಸ್ಪತ್ರೆಯ ಮುಂಭಾಗ ನಕಲಿ ಬಂಗಾರದ ಸರವನ್ನು ತೋರಿಸಿ ಆ ನಕಲಿ ಬಂಗಾರದ ಸರವನ್ನು ಕೊಟ್ಟು ನಂತರ 3,500 ರೂ. ನಗದು ಹಾಗೂ ಒಂದು ಜೊತೆ ಬಂಗಾರದ ಬೆಂಡೋಲೆಯನ್ನು ಕಿತ್ತು ಪರಾರಿಯಾದ ಬಗ್ಗೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಅರೋಪಿಗಳಿಂದ ಸುಲಿಗೆ ಮಾಡಿದ್ದ ಶಿರಾಳಕೊಪ್ಪ ಠಾಣೆ ಮತ್ತು ಶಿಕಾರಿಪುರ ಪಟ್ಟಣ ಠಾಣೆಯ ಒಟ್ಟು 02 ಪ್ರಕರಣಗಳಲ್ಲಿ ಒಟ್ಟು 2.64ಲಕ್ಷ ರೂ. ಮೌಲ್ಯದ ಒಟ್ಟು 67 ಗ್ರಾಂ ಬಂಗಾರದ ಆಭರಣಗಳನ್ನು ಹಾಗೂ ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿರುವ ಮೂರು ದ್ವಿಚಕ್ರ ವಾಹನಗಳ ಅಂದಾಜು ಮೊತ್ತ 1,20,000/-ರೂ. ಹಾಗೂ ಒಂದು ಚಾಕುವನ್ನು ವಶಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಎಸ್ಪಿ ಕೆ.ಎಂ. ಶಾಂತರಾಜು ತಿಳಿಸಿದ್ದಾರೆ.
ಕೃಷ್ಣಪ್ಪ ಬಾಲಕೃಷ್ಣಪ್ಪ ಬಿನ್ ಲೇಟ್ ಗೋವಿಂದಪ್ಪ, (60) ಭದ್ರಾಪುರ ಗ್ರಾಮ, ಶಿಕಾರಿಪುರ ತಾಲೂಕು, ನೇರಪ್ಪ ಬಿನ್ ರಾಜಪ್ಪ ಕೊರಚರ, (42), ಭದ್ರಾಪುರ ಗ್ರಾಮ, ಶಿಕಾರಿಪುರ, ವೀರೇಶ ಬಿನ್ ತೀರ್ಥಪ್ಪ, (29) ಹೊಸೂರು ಗ್ರಾಮ, ಶಿಕಾರಿಪುರ ಹಾಗೂ ಪಂಚಪ್ಪ ಬಿನ್ ಯಲ್ಲಪ್ಪ ದಾನಿಹಳ್ಳಿ, (48) ನ್ಯಾಮತಿ ತಾಲ್ಲೂಕು ಬಂಧಿತ ಆರೋಪಿಗಳಾಗಿದ್ದಾರೆ.
ಎ.ಎಸ್.ಪಿ ಶಿಕಾರಿಪುರ ಅದ್ದೂರು ಶ್ರೀನಿವಾಸಲು ಮಾರ್ಗದರ್ಶನದಲ್ಲಿ ಸಿ.ಪಿ.ಐ ಗುರುರಾಜ್ ಎನ್. ಮೈಲಾರ್ ರವರ ಮೇಲುಸ್ತುವಾರಿಯಲ್ಲಿ ಪಿಎಸ್ಐ ರಮೇಶ್.ಟಿ ಶಿರಾಳಕೊಪ್ಪ ಠಾಣೆ ಹಾಗೂ ಶಿರಾಳಕೊಪ್ಪ ಠಾಣೆಯ ಸಿ.ಹೆಚ್.ಸಿ ಕೋಟ್ರೇಶಪ್ಪ, ಕಿರಣ್ ಕುಮಾರ್, ಗಿರೀಶ್ ಸಿಪಿಸಿ ರವರಾದ ಮಂಜುನಾಥ್, ನಾಗರಾಜ್, ಮಂಜುನಾಯ್ಕ, ರವಿನಾಯ್ಕ, ಎ.ಪಿ.ಸಿ ಕಾಂತೇಶ, ಶಿಕಾರಿಪುರ ಟೌನ್ ಠಾಣೆಯ ಸಿಬ್ಬಂದಿಗಳಾದ ಪ್ರಶಾಂತ, ನಾಗರಾಜ, ಶಿಕಾರಿಪುರ ಗ್ರಾಮಾಂತರ ಠಾಣೆಯ ವಿನಯ್, ಶಿವಕುಮಾರ್ ಎ.ಹೆಚ್.ಸಿ ಆದರ್ಶ ರವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.