ಸಾಗರ : ಇಲ್ಲಿನ ಇತಿಹಾಸ ಪ್ರಸಿದ್ದವಾದ ಶ್ರೀ ಮಹಾಗಣಪತಿ ದೇವಸ್ಥಾನ ಮಳೆಯಿಂದ ಸಂಪೂರ್ಣ ಸೋರುತ್ತಿದ್ದು, ದೇವಸ್ಥಾನದ ಕಟ್ಟಡ ರಕ್ಷಣೆ ಮಾಡಲು ಭಕ್ತಾದಿಗಳು ಟಾರ್ಪಲ್ ಹೊದೆಸುವ ಮೂಲಕ ಆಡಳಿತದ ಗಮನ ಸೆಳೆದಿದ್ದಾರೆ. ದೇವಸ್ಥಾನ ಸೋರುತ್ತಿರುವ ಕುರಿತು ಮಹಾಗಣಪತಿ ದೇವಸ್ಥಾನ ಹಿತರಕ್ಷಣಾ ಸಮಿತಿ ಸಂಚಾಲಕ ಐ.ವಿ.ಹೆಗಡೆ ಉಪವಿಭಾಗಾಧಿಕಾರಿಗಳಿಗೆ ದೇವಸ್ಥಾನವನ್ನು ತುರ್ತು ರಿಪೇರಿ ಮಾಡಲು ಮನವಿ ಸಲ್ಲಿಸಿದ್ದಾರೆ.
ಇತಿಹಾಸ ಪ್ರಸಿದ್ದವಾದ ಸಾಗರದ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರಗೊಂಡು ಮೂರ‍್ನಾಲ್ಕು ವರ್ಷದಲ್ಲಿ ಸಂಪೂರ್ಣ ಸೋರುತ್ತಿದ್ದು ಭಕ್ತರಿಗೆ ತೊಂದರೆಯಾಗುತ್ತಿದೆ. ದೇವಸ್ಥಾನದ ಮುಖಮಂಟಪ, ಘಂಟಾ ಮಂಟಪ ಸಂಪೂರ್ಣ ಸೋರುತ್ತಿದ್ದು, ಭಕ್ತಾದಿಗಳಿಗೆ ದೇವಸ್ಥಾನದೊಳಗೆ ಬರಲು ಭಯಬೀಳುವ ಸ್ಥಿತಿ ನಿರ್ಮಾಣವಾಗಿದೆ.
ಸೋರಿಕೆಯಾದ ನೀರು ಭಕ್ತರು ದೇವರ ದರ್ಶನ ಪಡೆಯುವ ಜಾಗದಲ್ಲಿ ನಿಲ್ಲುತ್ತಿದೆ. ನೀರು ವಿದ್ಯುತ್ ತಂತಿಗಳಿಗೆ ತಗುಲಿ ಆಧಾರಕ್ಕಾಗಿ ಕೊಟ್ಟ ಸ್ಟೀಲ್ ಪೈಪ್ ಹಾಗೂ ಸ್ಟೀಲ್ ಗೇಟ್‌ಗಳನ್ನು ಮುಟ್ಟಿದರೆ ವಿದ್ಯುತ್ ಶಾಕ್ ಹೊಡೆಯುತ್ತಿದೆ. ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಲು ಸಹ ಆಗುತ್ತಿಲ್ಲ.
ಶ್ರಾವಣ ಮಾಸದಲ್ಲಿ ಹೆಚ್ಚಿನ ಹಬ್ಬಹರಿದಿನಗಳು ಇದ್ದು ಭಕ್ತರು ದೊಡ್ಡ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಬರುತ್ತಾರೆ. ಈಗಾಗಲೆ ಸಾಕಷ್ಟು ಭಕ್ತರು ಕರೆಂಟ್ ಹೊಡೆಸಿಕೊಂಡು ಹೋಗಿದ್ದಾರೆ. ಹೆಚ್ಚಿನ ಅನಾಹುತ ಸಂಭವಿಸುವ ಮೊದಲು ತಕ್ಷಣ ರಿಪೇರಿ ಕಾರ್ಯ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.