ಶಿವಮೊಗ್ಗ: ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಎರಡು ಅಪರೂಪದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಮೂಲಕ ವೈದ್ಯಕೀಯ ಲೋಕದಲ್ಲಿ ದಾಪುಗಾಲು ಹಾಕಿದೆ ಎಂದು ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಗ್ಯಾಸ್ಟೋ ವಿಭಾಗದ ತಜ್ಞ ಡಾ.ಶಿವಕುಮಾರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಖಿಲೇಶಿಯಾ ಎಂಬುದು ಒಂದು ವಿಚಿತ್ರವಾದ ಕಾಯಿಲೆ. ಇದು ಲಕ್ಷದಲ್ಲಿ ಒಬ್ಬರಿಗೆ ಮಾತ್ರ ಕಾಣಿಸಿಕೊಳ್ಳುತ್ತದೆ. ಇದರ ಪ್ರಮುಖ ಲಕ್ಷಣ ಆಹಾರ ತೆಗೆದುಕೊಳ್ಳುವಾಗ ಸರಾಗವಾಗಿ ಜಠರಕ್ಕೆ ಹೋಗುವುದಿಲ್ಲ. ಅನ್ನನಾಳದಲ್ಲಿನ ನರಕೋಶಗಳು ಅರಿವಿಲ್ಲದ ಕಾರಣ ಅವು ಕ್ಷೀಣಿಸುತ್ತವೆ. ನುಂಗಿದ ಆಹಾರವು ಹೊಟ್ಟೆಗೆ ಸೇರದೆ ತುಂಬಾ ತೊಂದರೆಯಾಗುತ್ತದೆ. ಇಂತಹ ಕಾಯಿಲೆ ಲಕ್ಷಣವಿರುವ ದಾವಣಗೆರೆ ಮೂಲದ ಬಿ.ಎಂ. ಸತೀಶ್ ಅವರಿಗೆ ಯಶಸ್ವಿಯಾಗಿ ನೂತನ ರೀತಿಯ ಪರ್ ಓರಲ್ ಎಂಡೋಸ್ಕೋಪಿಕ್ ಮಯೋಟಮಿ ಮೂಲಕ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ ಎಂದರು.
ಇದೊಂದು ವಿಶಿಷ್ಟ ರೀತಿಯ ಶಸ್ತ್ರ ಚಿಕಿತ್ಸೆ ಆಗಿದ್ದು, ಇದನ್ನು ನಮ್ಮ ಆಸ್ಪತ್ರೆಯ ತಜ್ಞವೈದ್ಯರು ರೋಗಿಯ ವಿವರಣೆ ಪಡೆದು ಅನ್ನನಾಳದ ಗೋಡೆ ಒಳಗೆ ಸುರಂಗ ರಚಿಸಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಶಿವಮೊಗ್ಗ ಮತ್ತು ಸುತ್ತಮುತ್ತಲ ಜಿಲ್ಲೆಯಲ್ಲಿ ನಡೆದ ಮೊದಲ ಪ್ರಕರಣ ಇದಾಗಿದೆ ಎಂದರು.
ಹಾಗೆಯೇ ೭ ವರ್ಷದ ರಚನಾ ಎಂಬ ಹೆಣ್ಣುಮಗುವೊಂದಕ್ಕೆ ಎರಡು ತಿಂಗಳ ಕಾಲದಿಂದ ಹೊಟ್ಟೆನೋವು, ಜೊತೆಗೆ ವಾಂತಿ, ಪಿತ್ಥಕೋಶದಲ್ಲಿನ ಕಲ್ಲು ಇದನ್ನು ತೆಗೆಯಲು ಎಂಡೋಸ್ಕೋಪಿಕ್‌ನಲ್ಲಿ ಕಷ್ಟವಾಗುತ್ತಿತ್ತು. ಏಕೆಂದರೆ ಆ ಸಣ್ಣ ಮಗುವಿಗೆ ಈ ರೀತಿಯ ಚಿಕಿತ್ಸೆಯಿಂದ ಎಲ್ಲಾ ರೀತಿಯ ತೊಂದರೆಗಳು ಆಗುವ ಸಾಧ್ಯತೆ ಇತ್ತು. ಆಸ್ಪತ್ರೆಯ ವೈದ್ಯರು ಎಲ್ಲಾ ರೀತಿಯಲ್ಲೂ ಇಆರ್‌ಸಿಪಿ ಮೂಲಕ ಅರವಳಿಕೆ ತಜ್ಞರ ತಂಡದಿಂದ ವಿಶೇಷವಾಗಿ ಸ್ಟಂಟ್ ಅಳವಡಿಸುವ ಮೂಲಕ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದರು ಎಂದರು.
ಈ ಎರಡೂ ಪ್ರಕರಣಗಳು ವಿಶೇಷವಾಗಿವೆ ಮತ್ತು ಬೆಂಗಳೂರು ಮತ್ತು ಮಣಿಪಾಲ್ ಬಿಟ್ಟರೆ ಬೇರೆಲ್ಲೂ ಈ ರೀತಿಯ ಚಿಕಿತ್ಸೆ ಸಿಗುವುದು ಕಷ್ಟ. ಶಿವಮೊಗ್ಗದಲ್ಲಿ ಇದು ಯಶಸ್ವಿಯಾಗಿದೆ ಎಂದರು.
ಪತ್ರಿಕಾಗೊಷ್ಠಿಯಲ್ಲಿ ಆಸ್ಪತ್ರೆಯ ಎಂಡಿ ವರ್ಗಿಸ್ ಪಿ.ಜಾನ್, ಡಾ. ಉಮೇಶ್ ನಾಯ್ಕ, ಡಾ. ಚಕ್ರವರ್ತಿ ಇದ್ದರು.