Site icon TUNGATARANGA

ಯುವಕರನ್ನು ಆಕರ್ಷಿಸುವ ಸಿನಿಮಾ|‘ನಮಸ್ತೇ ಗೋಷ್ಟ್’ ಜು.14 ರಂದು ಬಿಡುಗಡೆ

ಶಿವಮೊಗ್ಗ: ಶಿವಮೊಗ್ಗ ಕಲಾತಂಡದವರೇ ನಿರ್ಮಿಸಿ ನಿರ್ದೇಶಿಸಿರುವ ಬಹುನಿರೀಕ್ಷಿತ ‘ನಮಸ್ತೇ ಗೋಷ್ಟ್’ ಸಿನಿಮಾ ನಗರದ ಭಾರತ್ ಚಿತ್ರಮಂದಿರ ಸೇರಿದಂತೆ ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಜು.೧೪ರಂದು ಬಿಡುಗಡೆಯಾಗಲಿದ್ದು, ಮಧ್ಯಾಹ್ನ ೨ ಗಂಟೆಗೆ ಭಾರತ್ ಚಿತ್ರಮಂದಿರದಲ್ಲಿ ಪ್ರದರ್ಶನವಿರುತ್ತದೆ ಎಂದು ಸಹಾಯಕ ನಿರ್ದೇಶಕಿ ರೂಪಾ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮಸ್ತೇ ಗೋಷ್ಟ್ ಚಿತ್ರವು ವಿಭಿನ್ನ ರೀತಿಯಲ್ಲಿದ್ದು, ಈಗಾಗಲೇ ಹಲವು ಕಾಲೇಜುಗಳಲ್ಲಿ ಬಿಡುಗಡೆಗೂ ಮುನ್ನವೇ ಪ್ರೀಮಿಯರ್ ಶೋ ನಡೆಸಿ ಚಿತ್ರ ತೋರಿಸಿದ್ದೇವೆ. ಸುಮಾರು ೩೦ ಕಾಲೇಜುಗಳ ೬ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿನಿಮಾ ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾವನ್ನು ಮತ್ತೊಂದಿಷ್ಟು ಜನರು ನೋಡುವಂತೆ ಚಿತ್ರಕ್ಕೆ ಹೆಚ್ಚು ಪ್ರಚಾರ ಸಿಗಬೇಕು ಎಂಬುದು ನಮ್ಮ ಉದ್ದೇಶ ಎಂದರು.


ಶಿವಮೊಗ್ಗದವರೇ ಆದ ನಟ ಹರೀಶ್ ಮಾತನಾಡಿ, ಇದು ಭಯಾನಕ ಮತ್ತು ಹಾಸ್ಯಮಿಶ್ರಿತ ಚಿತ್ರವಾಗಿದೆ. ಇಯರ್‌ಫೋನ್ ಬಳಕೆಯಿಂದ ಏನಾಗಬಹುದು ಎಂಬ ಸಂದೇಶ ಕೂಡ ಇದರಲ್ಲಿದೆ. ಯುವಕರನ್ನು ಹೆಚ್ಚಾಗಿ ಇದು ಆಕರ್ಷಿಸುತ್ತದೆ. ಮುಖ್ಯ ಪಾತ್ರದಲ್ಲಿ ನಿರ್ದೇಶಕ ಭರತ್‌ನಂದಾ, ನಾಯಕಿಯಾಗಿ ವಿದ್ಯಾರಾಜ್ ಕಾಣಿಸಿಕೊಂಡಿದ್ದಾರೆ. ಮುಖ್ಯ ಪಾತ್ರಗಳಲ್ಲಿ ನಾನೂ ಸೇರಿದಂತೆ ಬಾಲರಾಜ್ ವಾಡಿ, ಶಿವಕುಮಾರ್ ಆರಾಧ್ಯ, ಅಖಿಲೇಶ್ ಮುಂತಾದವರು ನಟಿಸಿದ್ದಾರೆ ಎಂದರು.


ತಂತ್ರಜ್ಞಾನದಲ್ಲೂ ಕೂಡ ಶಿವಮೊಗ್ಗದವರೇ ಹೆಚ್ಚಾಗಿದ್ದು, ರೂಪಾ ಹರೀಶ್ ಪ್ರಸಾದನ ಕೆಲಸ ಮಾಡಿದ್ದಾರೆ ಮಧುಸೂದನ್ ಅವರ ಛಾಯಾಗ್ರಹಣವಿದೆ. ಒಟ್ಟಾರೆ ಸಿನಿಮಾದಲ್ಲಿ ಶೇ.೮೦ರಷ್ಟು ಶಿವಮೊಗ್ಗದವರೇ ಇದ್ದಾರೆ. ಶಿವಮೊಗ್ಗದ ಜನತೆ ಯುವಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಧುಸೂದನ್, ಅಖಿಲೇಶ್, ಶಶಿ, ಹೊಂಗಿರಣ ಚಂದ್ರಶೇಖರ್ ಇದ್ದರು.

Exit mobile version