Site icon TUNGATARANGA

ಸಾಗರ| ರಾಜ್ಯದಲ್ಲಿ ನಿಮ್ಮ ಸರ್ಕಾರವಿದೆ ಕೇಂದ್ರದಲ್ಲಿ ನಮ್ಮ ಸರ್ಕಾರವಿದೆ| ಸಂಸದ ಬಿ.ವೈ.ಆರ್ ಹೀಗೂ ಹೇಳಲು ಕಾರಣವೇನು ?

ಸಾಗರ : ನಾನು ಸ್ಥಳೀಯ ಶಾಸಕರಿಗೆ ಪ್ರತಿಸ್ಪರ್ಧಿಯಲ್ಲ. ರಾಜ್ಯದಲ್ಲಿ ನಿಮ್ಮ ಸರ್ಕಾರವಿದೆ. ಕೇಂದ್ರದಲ್ಲಿ ನಮ್ಮ ಸರ್ಕಾರವಿದೆ. ಎರಡೂ ಸರ್ಕಾರಗಳಿಂದ ಅನುದಾನ ತಂದು ಕ್ಷೇತ್ರದ ಅಭಿವೃದ್ದಿ ಮಾಡೋಣ. ಅಂತಿಮವಾಗಿ ನಮ್ಮ ಗುರಿ ಜನರಿಗೆ ಸರ್ಕಾರದ ಸೌಲಭ್ಯ ತಲುಪಿಸುವುದೇ ಆಗಿರುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.


ಇಲ್ಲಿನ ವಾಸವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿವಿಧ ಮೋರ್ಚಗಳ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನವನ್ನು ಪಡೆದು ಸಾಗರವನ್ನು ಮಾದರಿ ಕ್ಷೇತ್ರವಾಗಿ ಮಾಡಲು ಪ್ರಯತ್ನಿಸೋಣ ಎಂದು ತಿಳಿಸಿದರು.


ಕಾಂಗ್ರೇಸ್ ಗ್ಯಾರೆಂಟಿ ಘೋಷಣೆ ಮೂಲಕ ಅಧಿಕಾರಕ್ಕೆ ಬಂದಿದೆ. ಚುನಾವಣೆ ಮುನ್ನ ನೀಡಿದ ಭರವಸೆ ಒಂದಾದರೆ ಈಗ ನಡೆದುಕೊಳ್ಳುತ್ತಿರುವುದು ಅದಕ್ಕೆ ತದ್ವಿರುದ್ದ. ಪದವೀಧರರಿಗೆ ಮಾಶಾಸನ ಕೊಡುತ್ತೇವೆ ಎಂದಿದ್ದ ಕಾಂಗ್ರೇಸ್ ಈಗ ೨೦೨೨-೨೩ನೇ ಸಾಲಿನ ಪದವೀಧರರಿಗೆ ಮಾತ್ರ ಎಂದು ಕಂಡಿಷನ್ ಹಾಕಿದೆ. ೧೦ ಕೆಜಿ ಅಕ್ಕಿ ಕೊಡುತ್ತೇವೆ ಎಂದು ಭರವಸೆ ನೀಡಿತ್ತು.

ಅದಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ನೀಡುತ್ತಿರುವ ಐದು ಕೆ.ಜಿ. ಅಕ್ಕಿಯನ್ನು ಹೊರತುಪಡಿಸಿ ರಾಜ್ಯದ ಜನರಿಗೆ ೧೦ ಕೆ.ಜಿ. ಅಕ್ಕಿಯನ್ನು ಕೊಡಬೇಕು. ಎಲ್ಲ ಪಡಿತರಚೀಟಿದಾರರ ಖಾತೆಗೆ ೧೦ ಕೆ.ಜಿ. ಅಕ್ಕಿ ಹಣವನ್ನು ಜಮೆ ಮಾಡಬೇಕು. ವಿದ್ಯುತ್ ದರವನ್ನು ದಿಢೀರನೇ ಎರಿಸಿದ್ದರಿಂದ ಜನರು ತತ್ತರಿಸಿ ಹೋಗಿದ್ದಾರೆ. ಸರ್ಕಾರ ಒಂದು ಕೈನಲ್ಲಿ ಕೊಟ್ಟು ಮತ್ತೊಂದ ಕೈನಲ್ಲಿ ಕಿತ್ತುಕೊಳ್ಳುತ್ತಿದೆ ಎಂದು ದೂರಿದರು.


ಶಿವಮೊಗ್ಗ ಲೋಕಸಭಾ ಕ್ಷೇತ್ರವ್ಯಾಪ್ತಿಯ ಸಮಗ್ರ ಅಭಿವೃದ್ದಿಗೆ ಅನುದಾನ ತರಲಾಗಿದೆ. ಕಾರ್ಯಕರ್ತರು ಕ್ಷೇತ್ರದಲ್ಲಾಗಿರುವ ಅಭಿವೃದ್ದಿ ಮಹಾಪೂರವನ್ನು ಜನರ ಮನೆಮನೆಗೆ ತಲುಪಿಸಬೇಕು. ಈ ಬಾರಿ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿವಮೊಗ್ಗ ಜಿಲ್ಲೆಗೆ ನಯಾಪೈಸೆ ಕೊಟ್ಟಿಲ್ಲ. ೨೦೦೯ರಿಂದ ೨೦೨೨ರವರೆಗೆ ಶಿವಮೊಗ್ಗ ಜಿಲ್ಲೆಗೆ ಅನುದಾನದ ಸುವರ್ಣ ಯುಗವಾಗಿತ್ತು ಎಂದ ಸಂಸದರು, ಸದ್ಯದಲ್ಲಿಯೆ ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ತಾಳಗುಪ್ಪ-ಸಿದ್ದಾಪುರ ರೈಲ್ವೆ ಯೋಜನೆ ವಿಸ್ತರಣೆಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು.


ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಸಂಕಲ್ಪ ಕೈಗೊಳ್ಳಬೇಕಾಗಿದೆ. ಬಿಜೆಪಿ ಸೋತರೆ ದೇಶ ಸೋತಂತೆ. ಸಂಸದ ಬಿ.ವೈ.ರಾಘವೇಂದ್ರ ಅನುಕರಣೀಯ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ, ಸಾಗರ ಕ್ಷೇತ್ರದ ಬಿ.ಎಚ್.ರಸ್ತೆ ಅಗಲೀಕರಣ, ತುಮರಿ ಸೇತುವೆ ನಿರ್ಮಾಣದಂತಹ ವಿಶೇಷ ಯೋಜನೆ ತಂದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಾವು ಮೈಮರೆಯುವುದು ಬೇಡ. ಹಾಲಿ ಸಾಗರ ಕ್ಷೇತ್ರದಲ್ಲಿ ದಬ್ಬಾಳಿಕೆ, ದೌರ್ಜನ್ಯ ಪ್ರಾರಂಭವಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುತ್ತದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಡಾ. ರಾಜನಂದಿನಿ ಕಾಗೋಡು, ರತ್ನಾಕರ ಹೊನಗೋಡು, ಪ್ರಸನ್ನ ಕೆರೆಕೈ, ಮಧುರಾ ಶಿವಾನಂದ್, ಮಾಲತೇಶ್, ವಿ.ಮಹೇಶ್ ಇನ್ನಿತರರು ಉಪಸ್ಥಿತರಿದ್ದರು. ಎಸ್.ಕೆ.ಪ್ರಭಾವತಿ ಪ್ರಾರ್ಥಿಸಿದರು. ಲೋಕನಾಥ ಬಿಳಿಸಿರಿ ಸ್ವಾಗತಿಸಿದರು. ಗಣೇಶಪ್ರಸಾದ್ ಪ್ರಾಸ್ತಾವಿಕ ಮಾತನಾಡಿದರು. ಸಂತೋಷ್ ವಂದಿಸಿದರು. ಪ್ರದೀಪ್ ಆಚಾರಿ ನಿರೂಪಿಸಿದರು

Exit mobile version