Site icon TUNGATARANGA

“ಫ್ಲ್ಯಾಗ್ ಆಫ್ ಫೇತ್” ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ


ಶಿವಮೊಗ್ಗ: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಸ್ಕಾಲ್‌ ಇಂಟರ್‌ನ್ಯಾಷನಲ್‌ ಇಂಡಿಯಾ (ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಸಂಸ್ಥೆ) ವತಿಯಿಂದ ಅಕ್ಟೋಬರ್‌ ತಿಂಗಳಿನಲ್ಲಿ ನಡೆಯಲಿರುವ ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ ಕಾರ್ಯಕ್ರಮದ ʼಫ್ಲಾಗ್‌‌ ಆಫ್‌ ಫೇತ್ʼ (ಭರವಸೆಯ ಬಾವುಟ) ಅನ್ನು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್. ಅವರು ಬಿಡುಗಡೆ ಮಾಡಿದರು.

ಶಿವಮೊಗ್ಗದ ಒಕ್ಕಲಿಗರ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸ್ಕಾಲ್‌ ಸಂಸ್ಥೆಯು ನಡೆಸುತ್ತಿರುವ ಈ ಕಾರ್ಯಕ್ರಮ ಶ್ಲಾಘನೀಯ. ಶಿವಮೊಗ್ಗದಲ್ಲಿ ಬಹಳಷ್ಟು ಪ್ರವಾಸಿ ತಾಣಗಳಿವೆ. ಇಲ್ಲಿನ ಪ್ರವಾಸೋದ್ಯಮ ಸಾಕಷ್ಟು ಅಭಿವೃದ್ಧಿಯಾಗಲಿದೆ. ಇಂತಹ ಕಾರ್ಯಕ್ರಮಕ್ಕೆ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.

ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ನ ಚೇರ್‌ಮನ್‌ ಸುದೀಪ್ತಾ ಮಾತನಾಡಿ, ಕೊರೊನಾದಿಂದ ಬಹಳಷ್ಟು ನಷ್ಟ ಅನುಭವಿಸಿದ ಕ್ಷೇತ್ರಗಳ ಪೈಕಿ ಪ್ರವಾಸೋದ್ಯಮ ಪ್ರಮುಖವಾದುದು. ಕರ್ನಾಟಕದ ಪ್ರವಾಸೋದ್ಯಮವನ್ನು ಉತ್ತೇಜಿಸಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ರಾಜ್ಯ ಹೆಸರು ಮಾಡುವಂತೆ ಮಾಡುವುದು ನಮ್ಮ ಉದ್ದೇಶ. ಮೈಸೂರು ಹಾಗೂ ಬೆಂಗಳೂರಿನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಎಕ್ಸಿಬಿಷನ್‌ಗಳು, ಚರ್ಚಾಕೂಟಗಳು ಇರಲಿವೆ ಎಂದು ವಿವರಿಸಿದರು

.

ಸ್ಕಾಲ್‌ ಬೆಂಗಳೂರು ವಿಭಾಗದ ಅನುರಾಗ್‌ ಗುಪ್ತಾ ಮಾತನಾಡಿ, ಶಿವಮೊಗ್ಗದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಪ್ರಕೃತಿಯ ಮಡಿಲಿನಲ್ಲಿ ಸಮಯ ಕಳೆಯಬೇಕು ಎನ್ನುವವರು ಶಿವಮೊಗ್ಗಕ್ಕೆ ಬರಬೇಕು. ಇಲ್ಲಿನ ಪ್ರವಾಸೋದ್ಯಮವನ್ನು ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧವಾಗಿಸಲು ಸ್ಕಾಲ್‌ ಕಾಂಗ್ರೆಸ್‌ ಕಾರ್ಯಕ್ರಮ ಸಹಕಾರಿಯಾಗಲಿದೆ. ಕಾರ್ಯಕ್ರಮದಲ್ಲಿ ನಡೆಯುವ ಎಕ್ಸಿಬಿಷನ್‌ನಲ್ಲಿ ಶಿವಮೊಗ್ಗ ಪ್ರವಾಸೋದ್ಯಮವನ್ನು ಪರಿಚಯಿಸುವ ಮಳಿಗೆ ಸಹ ಇರಲಿದೆ. ಈ ಕಾರ್ಯಕ್ರಮದಿಂದ ಒಟ್ಟಾರೆಯಾಗಿ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದರು.


ಸ್ಕಾಲ್‌ ಇಂಟರ್‌ನ್ಯಾಷನಲ್‌ ಇಂಡಿಯಾ ವತಿಯಿಂದ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಅಕ್ಟೋಬರ್‌4ರಿಂದ 7ರವರೆಗೆ ಮೈಸೂರು ಹಾಗೂ ಬೆಂಗಳೂರಿನಲ್ಲಿ ಸ್ಕಾಲ್‌ಇಂಡಿಯಾ ಕಾಂಗ್ರೆಸ್‌ ಕಾರ್ಯಕ್ರಮ ನಡೆಯಲಿದೆ. ಪ್ರವಾಸೋದ್ಯಮದ ಏಳಿಗೆಗೆ, ಅಭಿವೃದ್ಧಿಗೆ ಶ್ರಮಿಸುವ ವೃತ್ತಿಪರರ ಸಮಾಗಮ ಇದಾಗಿದ್ದು, ಈ ನಿಟ್ಟಿನಲ್ಲಿ ಮುಂದಿನ ಮೂರು ತಿಂಗಳುಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟ ವಿವಿಧ ಚಟುವಟಿಕೆಗಳು ನಡೆಯಲಿವೆ.

ಸ್ಕಾಲ್‌ ಇಂಟರ್‌ನ್ಯಾಷನಲ್‌ ಬಗ್ಗೆ:
ಸ್ಕಾಲ್‌ಇಂಟರ್‌ನ್ಯಾಷನಲ್‌ಎಂಬುದು ಕಳೆದ 85 ವರ್ಷಗಳಿಂದ ಇಡೀ ಜಗತ್ತಿನ ಪ್ರವಾಸೋದ್ಯಮವನ್ನು ಒಂದೇ ಸೂರಿನಡಿಯಲ್ಲಿರಿಸಿ ಪ್ರವಾಸೋದ್ಯಮದ ಏಳಿಗೆಗಾಗಿ ಶ್ರಮಿಸುತ್ತಿರುವ ಸಂಸ್ಥೆ. ಇದು UNWTOನ ಅಫಿಲಿಯೇಟ್‌ಸದಸ್ಯ ಸಂಸ್ಥೆಯಾಗಿದೆ. ಪ್ರಪಂಚದಾದ್ಯಂತ ಬರೋಬ್ಬರಿ 95 ರಾಷ್ಟ್ರಗಳಲ್ಲಿ ಸ್ಕಾಲ್‌ನ ವಿಭಾಗಗಳಿವೆ ಹಾಗೂ ಎಲ್ಲದರಲ್ಲೂ ಸೇರಿ 12,500ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಭಾರತದ 16 ನಗರಗಳಲ್ಲಿ ಸ್ಕಾಲ್‌ನ 17 ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ.  

Exit mobile version