ಶಿವಮೊಗ್ಗ, ಸುದ್ಧಿಗಾಗಿ ಸೇವೆ ಮಾಡಲಿಲ್ಲ, ಸೇವೆ ಮಾಡಿ ಸಿದ್ಧಿಯಾಗಲಿಲ್ಲಿ. ಸೇವೆ ಮಾಡುವ ಗುಣ ಮತ್ತು ಕಾಯಕ ನಿಷ್ಠೆವುಳ್ಳಂತಹ ಮಹಾನ್ ಶಿವಶರಣ ಹಡಪದ ಅಪ್ಪಣ್ಣ ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಶಿವಶರಣ ಶ್ರೀ ಹಡಪದ ಅಣ್ಣಪ್ಪ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಸವಪ್ರಿಯ ಕೂಡಲ ಚೆನ್ನಬಸವಣ್ಣ ಎಂಬ ಅಂಕಿತನಾಮದಲ್ಲಿ ಸುಮಾರು 250 ವಚನಗಳನ್ನು ರಚಿಸಿದ್ದಾರೆ. ವಚನ ಎಂದರೆ ಮಾತು, ಮಾತು ಯಾವಾಗಲೂ ಅರ್ಥಗರ್ಭಿತವಾಗಿರಬೇಕು.
ಬಸವಣ್ಣ ಮತ್ತು ಹಡಪದ ಅಪ್ಪಣ್ಣ ಇಬ್ಬರೂ ಬಾಗಲಕೋಟೆ ಜಿಲ್ಲೆಯ ಬಾಗೆವಾಡಿಯಲ್ಲಿ ಜನಿಸಿದವರಾಗಿದ್ದು, ಇಬ್ಬರ ವಿಚಾರಧಾರೆ ಒಂದೇ ಆಗಿತ್ತು. ಬಸವಣ್ಣ ಮತ್ತು ಹಡಪದ ಅಪ್ಪಣ್ಣ ಅವರ ಸಂಬಂಧ ಬಹಳ ಬಾಂಧವ್ಯದಿಂದ ಕೂಡಿತ್ತು. ಜನರು ಹಡಪದ ಅಪ್ಪಣ್ಣ ಅವರನ್ನು ನಿಂದಿಸುತ್ತಿದ್ದ ಸಂದರ್ಭದಲ್ಲಿ ಅವರಿಂದಲೇ ನಾನು ಶ್ರೇಷ್ಠ ವ್ಯಕ್ತಿಯಾಗಿದ್ದು ಎಂದು ಬಸವಣ್ಣ ಎಲ್ಲರೆದುರು ಹೇಳುತ್ತಿದ್ದರು. ಅವರು ಬಸವಣ್ಣನವರ ಒಡನಾಡಿಯಾಗಿದ್ದರು ಎಂದು ತಿಳಿಸಿದರು.
ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಮಾತನಾಡಿ, ಹಡಪದ ಅಪ್ಪಣ್ಣ ಅವರು ಸಮಾಜಕ್ಕೆ ಮಾದರಿಯಾಗಿ, ಅಂದಿನ ವಾಸ್ತವಿಕತೆಯನ್ನು, ಏಳಿಗೆಯನ್ನು, ಕಾಲಮಾನವನ್ನು ಮುಂದಿನ ಪೀಳಿಗೆಗೆ ತಿಳಿಸಲು ತಮ್ಮ ಜೀವಮಾನವನ್ನು ಮುಡಿಪಿಟ್ಟಿದ್ದಾರೆ. 4000 ವಚನಕಾರರು ಬಂದು ಹೋಗಿದ್ದಾರೆ, ಅವರಲ್ಲಿ ಬೇರೆಯವರಿಗೆ ಮಾದರಿಯಾದ ಮುಖ್ಯ ವಚನಕಾರರಲ್ಲಿ ಹಡಪದ ಅಪ್ಪಣ್ಣ ಕೂಡ ಒಬ್ಬರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ತಾಲ್ಲೂಕು ಹಡಪದ ಅಪ್ಪಣ್ಣ ಸೇವಾ ಸಂಘದ ಅಧ್ಯಕ್ಷ ಎಸ್.ವೀರಭದ್ರಯ್ಯ, ಗೌರವಾಧ್ಯಕ್ಷ ಮಲ್ಲೇಶಪ್ಪ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.