ಸಾಗರ : ಪೇಟೆ ಠಾಣೆ ವ್ಯಾಪ್ತಿಯಲ್ಲಿ ವೆಂಟಿಲೇಟರ್ ಮೂಲಕ ಮನೆಯೊಳಗೆ ಇಳಿದು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಶುಕ್ರವಾರ ಮಾಲುಸಹಿತ ವಶಕ್ಕೆ ಪಡೆದಿದ್ದಾರೆ.
ನಗರದ ಶಿವಮೊಗ್ಗ ರಸ್ತೆಯ ತೋಟಗಾರಿಕೆ ಇಲಾಖೆ ಹತ್ತಿರದ ಮಹ್ಮದ್ ರಫೀಕ್ ಎಂಬುವವರ ಮನೆಯ ವೆಂಟಿಲೇಟರ್ ಮೂಲಕ ಮನೆಯೊಳಗೆ ಇಳಿದು ಚಿನ್ನಾಭರಣ, ಬೆಲೆಬಾಳುವ ವಾಚು ಸೇರಿದಂತೆ ವಿವಿಧ ವಸ್ತುಗಳನ್ನು ಕಳ್ಳತನ ಮಾಡಿ, ಕಾರಿನೊಂದಿಗೆ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಮೂರು ದಿನದಲ್ಲಿ ಮಾಲುಸಹಿತ ಪತ್ತೆಹಚ್ಚಿದ್ದಾರೆ.
ಬಂಧಿತರಿಂದ ಕದ್ದ ಚಿನ್ನಾಭರಣ, ಕಾರು ಸಹಿತ ಒಟ್ಟು745729 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಭಟ್ಕಳ ಮದೀನ ಕಾಲೋನಿ ವಾಸಿ ಮಹ್ಮದ್ ಇಫ್ಜಾಲ್ ಯಾನೆ ಇಫ್ಜಲ್ ಭಟ್ಕಳದ ಶಿರೂರು ವಾಸಿ ಯಾಸಿನ್ ಸಾಬ್, ಭಟ್ಕಳ ಹೆಗ್ಗಲ್ ರಸ್ತೆ ನಿವಾಸಿ ಮಹ್ಮದ್ ಮುಸಾದಿಕ್ ಅವರನ್ನು ಬಂಧಿಸಲಾಗಿದೆ.
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಎಸ್. ಭೂಮರೆಡ್ಡಿ ಅವರ ಆದೇಶದ ಮೇರೆಗೆ ಪೊಲೀಸ್ ಉಪಾಧೀಕ್ಷಕ ರೋಹನ್ ಜಗದೀಶ್ ಇವರ ಸಾರಥ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಗರ ಠಾಣೆ ವೃತ್ತ ನಿರೀಕ್ಷಕರಾದ ಸೀತಾರಾಮ್ ಜೆ., ಕೆ.ವಿ.ಕೃಷ್ಣಪ್ಪ ಮಾರ್ಗದರ್ಶನದಲ್ಲಿ ಪಿಎಸ್‌ಐ ಶ್ರೀಪತಿ, ತುಕಾರಾಮ್ ಸಾಗರ್‌ಕರ್, ಅಪರಾಧ ವಿಭಾಗದ ಸಿಬ್ಬಂದಿಗಳಾದ ರತ್ನಾಕರ್, ನಾಗರಾಜ್ ನಾಯ್ಕ, ಶ್ರೀಧರ್, ಪ್ರಭಾಕರ್, ವಿಶ್ವನಾಥ್, ಡಿ.ಕೆ.ರಾಮನಗೌಡ ಪಾಟೀಲ್ ಇನ್ನಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.