Site icon TUNGATARANGA

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಮನವಿ

ಸಾಗರ : ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬುಧವಾರ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ ಸಾಗರ ಶಾಖೆ ವತಿಯಿಂದ ತಹಶೀಲ್ದಾರ್ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.


ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ರಾಜ್ಯ ಸಂಚಾಲಕ ರವೀಂದ್ರ ಸಾಗರ್, ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗಿರುವ ಕಳಪೆ ಗುಣಮಟ್ಟದ ಮತ್ತು ಹಾಳಾಗಿರುವ ಮೊಬೈಲ್‌ಗಳಿಂದ ಸರಿಯಾಗಿ ಅಂಕಿಅಂಶಗಳನ್ನು ದಾಖಲು ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ತಕ್ಷಣ ಮೊಬೈಲ್ ಹಿಂದಕ್ಕೆ ಪಡೆದು ಹೊಸ ಮೊಬೈಲ್‌ಗಳನ್ನು ನೀಡಬೇಕು. ಆರೋಗ್ಯ ಇಲಾಖೆ ಸಮೀಕ್ಷೆ ಕಾರ್ಯಕ್ಕೆ ನಿರಂತರವಾಗಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮೇಲೆ ಒತ್ತಡ ಹೇರಲಾಗುತ್ತಿದೆ. ಇದರಿಂದ ಕೆಲಸದ ಒತ್ತಡ ಹೆಚ್ಚುತ್ತಿದೆ. ಇದರ ಜೊತೆಗೆ ಇತರೆ ಇಲಾಖೆ ಕೆಲಸಗಳಿಗೂ ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದರು.


ಅಂಗನವಾಡಿಗೆ ಸರಬರಾಜು ಮಾಡುತ್ತಿರುವ ಮೊಟ್ಟೆ ಟೆಂಡರ್ ಪರಿಣಾಮ ಕಳಪೆ ಮತ್ತು ಕಡಿಮೆ ತೂಕ ಇರುವ ಮೊಟ್ಟೆಯನ್ನು ಪೂರೈಕೆ ಮಾಡಲಾಗುತ್ತಿದೆ. ಇದು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದ್ದು ತಕ್ಷಣ ಮೊಟ್ಟೆ ಖರೀದಿ ಟೆಂಡರ್ ಪ್ರಕ್ರಿಯೆ ನಿಲ್ಲಿಸಿ, ಖರೀದಿಯನ್ನು ಬಾಲವಿಕಾಸ ಸಮಿತಿಗೆ ನೀಡಬೇಕು. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿಗಳ ಬಾಡಿಗೆಯನ್ನು ತಕ್ಷಣ ಬಿಡುಗಡೆ ಮಾಡಬೇಕು. ಅಂಗನವಾಡಿಗಳಿಗೆ ಹಣ ಬಿಡುಗಡೆ ಮಾಡಬೇಕು ಮತ್ತು ಗ್ಯಾಸ್ ಬಿಲ್, ವಿದ್ಯುತ್ ಬಿಲ್ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.


ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಆರನೇ ಗ್ಯಾರಂಟಿಯಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರುಗಳಿಗೆ ಕ್ರಮವಾಗಿ ಮಾಸಿಕ ೧೫ಸಾವಿರ ರೂ. ಸಹಾಯಕಿಯರಿಗೆ ೧೦ಸಾವಿರ ರೂ. ಗೌರವಧನ ಹೆಚ್ಚಳ ಮಾಡಬೇಕು. ನಿವೃತ್ತರಿಗೆ ೩ ಲಕ್ಷ ರೂ. ಇಡಿಗಂಟು ನೀಡುವ ಜೊತೆಗೆ ಮಾಸಿಕ ೫ಸಾವಿರ ರೂ. ಪೆನ್ಸನ್ ನೀಡಬೇಕು ಎಂದು ಅಗ್ರಹಿಸಿದರು.


ತಾಲ್ಲೂಕು ಅಧ್ಯಕ್ಷೆ ಎಂ.ಆರ್. ಕೋಮಲಾಕ್ಷಿ, ಕಾರ್ಯದರ್ಶಿ ಕಲಾವತಿ, ಪ್ರಮುಖರಾದ ಶಾಂತಾ, ಪುಷ್ಪ ಆವಿನಹಳ್ಳಿ, ಮಂಜುಳಾ ಕಾರ್ಗಲ್, ರೇಖಾ, ಗಾಯತ್ರಿ, ಜುಬೇದಾ, ಮಾಸ್ತ್ಯಮ್ಮ, ವಿಜಯಲಕ್ಷ್ಮೀ, ಶಿವಕುಮಾರಿ, ವಿನೋದಾ, ಮೈತ್ರಿ ಮಂಜುಳಾ, ಸರೋಜ ಇನ್ನಿತರರು ಹಾಜರಿದ್ದರು.

Exit mobile version