Site icon TUNGATARANGA

ಸಂಸದ ಬಿ.ವೈ.ರಾಘವೇಂದ್ರ ವಿರುದ್ದ ಶಾಸಕ ಬೇಳೂರು ಕಿಡಿಕಾರಿದ್ದೇಕೆ ?

ಸಾಗರ : ಸಂಸದ ಬಿ.ವೈ.ರಾಘವೇಂದ್ರ ಕರೂರು ಭಾರಂಗಿ ಹೋಬಳಿಯಲ್ಲಿ ನೆಟ್‌ವರ್ಕ್ ಅಳವಡಿಕೆ ಸಂಬಂಧ ಅಧಿಕಾರಿಗಳ ಸಭೆಯನ್ನು ನಡೆಸಿದ್ದು, ಸೌಜನ್ಯಕ್ಕೂ ತಮ್ಮನ್ನು ಕರೆಯದಿರುವ ಬಗ್ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಕಿಡಿ ಕಾರಿದ್ದಾರೆ.

ಪತ್ರಕರ್ತರ ಜೊತೆ ಮಾತನಾಡಿದ ಅವರು ನಾಲ್ಕು ವರ್ಷದಿಂದ ಸಾಗರ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದ ಸಂಸದ ಬಿ.ವೈ.ರಾಘವೇಂದ್ರ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಜನರ ಜೊತೆ ಬೆರೆಯುವ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಿದರು.
ಕರೂರು ಭಾರಂಗಿ ಹೋಬಳಿಯ ನೆಟ್‌ವರ್ಕ್ ಸಮಸ್ಯೆ ಕುರಿತು ಗ್ರಾಮಸ್ಥರು ನಿರಂತರವಾಗಿ ಪ್ರತಿಭಟನೆ ನಡೆಸಿದ್ದರು. ನಾಲ್ಕು ವರ್ಷಗಳ ಕಾಲ ನೆಟ್‌ವರ್ಕ್ ಸೌಲಭ್ಯ ಕಲ್ಪಿಸುವ ಬಗ್ಗೆ ಗಮನ ಹರಿಸದೆ ಚುನಾವಣೆ ಹೊಸ್ತಿಲಿನಲ್ಲಿ ಒಂದಷ್ಟು ಟವರ್ ಮಂಜೂರು ಮಾಡಿಸಿಕೊಂಡು ಕ್ಷೇತ್ರದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಧಿಕಾರಿಗಳ ಸಭೆ ನಡೆಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ ಬೇಳೂರು, ಯೋಜನೆ ಕೇಂದ್ರದ್ದಾದರೂ ಟವರ್ ನಿರ್ಮಾಣಕ್ಕೆ ಜಾಗ ಕೊಡಬೇಕಾಗಿರುವುದು ರಾಜ್ಯ ಸರ್ಕಾರ. ರಾಜ್ಯ ಸರ್ಕಾರ ಮತ್ತು ನನ್ನನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳದೆ ಹೇಗೆ ಟವರ್ ನಿರ್ಮಾಣ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದರು.


ಬಿಜೆಪಿ ಒಡೆದ ಮನೆಯಾಗಿದೆ. ಈತನಕ ವಿಧಾನಸಭೆ ವಿಪಕ್ಷ ನಾಯಕನನ್ನು, ಬಿಜೆಪಿ ರಾಜ್ಯಾಧ್ಯಕ್ಷನನ್ನು ಆಯ್ಕೆ ಮಾಡಲು ಸಾಧ್ಯವಾಗದಷ್ಟು ನಿಶ್ಯಕ್ತ ಸ್ಥಿತಿಯಲ್ಲಿದೆ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದ ಸ್ಥಿತಿ ಬಿಜೆಪಿಯಲ್ಲಿರುವುದರಿಂದ ಯಾರನ್ನು ಆಯ್ಕೆ ಮಾಡಬೇಕು ಎಂದು ಒದ್ದಾಡುತ್ತಿರುವ ಬಿಜೆಪಿ ಮೊದಲು ತನ್ನ ನೆಲೆ ಸರಿಪಡಿಸಿಕೊಳ್ಳಲಿ. ವಿಧಾನಸಭಾ ಚುನಾವಣೆಯಲ್ಲಿ ತೀವೃ ಮುಖಭಂಗ ಅನುಭವಿಸಿರುವ ಬಿಜೆಪಿಗೆ ಮಾಡಲು ಬೇರೆ ಕೆಲಸವಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಗ್ಯಾರೆಂಟಿ ಒಂದೊಂದಾಗಿ ಜಾರಿ ಮಾಡುತ್ತಿದ್ದರೂ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಐದು ವರ್ಷ ಹಿಂದಿನ ಸರ್ಕಾರ ಮನೆ ಕೊಡದಿರುವುದು, ಆಶ್ರಯ ನಿವೇಶನ ಸೇರಿದಂತೆ ವಸತಿ ಯೋಜನೆ ಕೊಡದಿರುವ ಬಗ್ಗೆ ಯಡಿಯೂರಪ್ಪ ಏಕೆ ಧ್ವನಿ ಎತ್ತಿರಲಿಲ್ಲ. ಮೋದಿ ಪ್ರತಿ ಪ್ರಜೆಯ ಖಾತೆಗೆ ೧೫ ಲಕ್ಷ ರೂ. ಹಾಕದೆ ಇರುವುದು, ಪ್ರತಿವರ್ಷ ಎರಡು ಕೋಟಿ ಉದ್ಯೋಗ ಕೊಡದಿರುವ ಬಗ್ಗೆ ಯಡಿಯೂರಪ್ಪ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.


ಕ್ಷೇತ್ರವ್ಯಾಪ್ತಿಯಲ್ಲಿ ನೈತಿಕ ಪೊಲೀಸ್‌ಗಿರಿಗೆ ಅವಕಾಶ ಕಲ್ಪಿಸುವುದಿಲ್ಲ. ಗೋಹತ್ಯೆ, ಗೋ ಮೇಲೆ ಹಲ್ಲೆ ಮಾಡುತ್ತಿದ್ದರೆ ಅಂತವರ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ. ಯಾವುದೇ ಸಂಘಟನೆಗಳಾದರೂ ಅಂತಹ ಪ್ರಕರಣ ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ತಾವೆ ಕಾನೂನು ಕೈಗೆ ತೆಗೆದುಕೊಳ್ಳಲು ಮುಂದಾದರೆ ಸಹಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು.


ಜುಲೈ ೩ರಿಂದ ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ಅರಣ್ಯಹಕ್ಕು ಕಾಯ್ದೆ ಮತ್ತು ರೈತರನ್ನು ಒಕ್ಕಲೆಬ್ಬಿಸುತ್ತಿರುವುದರ ವಿರುದ್ದ ಗಮನ ಸೆಳೆಯಲಾಗುತ್ತದೆ. ಶರಾವತಿ ಹಿನ್ನೀರು ಪ್ರದೇಶದ ಕೆಲವು ಭಾಗಗಳನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿ ಘೋಷಣೆ ಮಾಡಲು ಮುಂದಾಗಿರುವ ಕ್ರಮವನ್ನು ಕೈಬಿಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತದೆ. ಗ್ರಾಮೀಣ ಭಾಗದ ಶಿಕ್ಷಕರ ಕೊರತೆ, ಬಸ್ ಕೊರತೆ ಬಗ್ಗೆ ಗಮನ ಸೆಳೆಯಲಾಗುತ್ತದೆ. ಮುಳುಗಡೆ ಸಂತ್ರಸ್ತರ ಬಗ್ಗೆ ಧ್ವನಿ ಎತ್ತಿದ್ದು ಕಾಂಗ್ರೇಸ್ ಪಕ್ಷ. ಅದಕ್ಕೆ ತಾರ್ಕಿಕ ಅಂತ್ಯ ಕಲ್ಪಿಸಲು ಪ್ರಯತ್ನ ನಡೆಸಲಾಗುತ್ತದೆ ಎಂದರು. –

Exit mobile version