ಶಿವಮೊಗ್ಗ,ಮ.೨:
ಸರಕಾರ ಸಿಗಂದೂರು ದೇಗುಲದ ಭಕ್ತರ ಭಾವನೆಗೆ ಬೆಲೆ ನೀಡಿ ಮೇಲುಸ್ತುವಾರಿ ಸಮಿತಿ ರದ್ದು ಮಾಡದಿದ್ದಲ್ಲಿ ಎಲ್ಲ ಭಕ್ತರನ್ನು ಸೇರಿಸಿಕೊಂಡು ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಇದಕ್ಕೆ ಚೌಡೇಶ್ವರಿ ದೇವಿಯ ಭಕ್ತರು ಹಾಗೂ ವಿವಿಧ ಸಮುದಾಯಗಳ ಮಠಾಧೀಶರನ್ನೂ ಸೇರಿಸಬೇಕೆಂಬ ನಿರ್ಣಯವನ್ನು ಈಡಿಗ ಸಂಘ ಕೈಗೊಂಡಿತು.
ಭಕ್ತರ ಶ್ರದ್ಧಾಕೇಂದ್ರ ಸಿಗಂದೂರು ಚೌಡೇಶ್ವರಿ ಜಿಲ್ಲಾ ಈಡಿಗರ ಸಂಘವು ಇಂದು ನಗರದಲ್ಲಿ ಆಯೋಜಿಸಿದ್ದ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
ಆಡಳಿತ ಮಂಡಳಿ ಮೇಲೆ ಬಾಹ್ಯ ಶಕ್ತಿಗಳು ಸವಾರಿ ಮಾಡುವುದು ಸರಿಯಲ್ಲ. ಈ ಬಗ್ಗೆ ಸರಕಾರದ ಪ್ರಮುಖರೊಂದಿಗೆ ಮಾತನಾಡುವುದಾಗಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಸಿಗಂದೂರು ಚೌಡಮ್ಮ ರಾಮಪ್ಪ ಅವರ ಕುಟುಂಬ ಪಾರಂಪರಿಕವಾಗಿ ಪೂಜೆ ಮಾಡಿಕೊಂಡು ಬಂದ ಮನೆದೇವರದು.. ಅವರ ಶ್ರಮದಿಂದ ಇಂದು ರಾಜ್ಯಕ್ಕೆ ದೇವಿ ಹೆಸರು ಕ್ಷೇತ್ರದ ಅಭಿವೃದ್ಧಿ ಹಾಗೂ ದೇವಿಯ ಶಕ್ತಿಯಿಂದಾಗಿ ಇಂದು ಭಕ್ತರ ಸಂಖ್ಯೆ ಹೆಚ್ಚಾಗಿದೆ. ಅಲ್ಲಿನ ವ್ಯವಸ್ಥೆ ಮೊದಲಿನಂತೆಯೇ ನಡೆದುಕೊಂಡು ಹೋಗಬೇಕು. ಸರಕಾರ ರಚಿಸಿರುವ ಮೇಲ್ವಿಚಾರಣ ಹಾಗೂ ಸಲಹಾ ಸಮಿತಿ ರದ್ದುಮಾಡಬೇಕಾಗಿದೆ ಈ ಬಗ್ಗೆ ಸಂಸದ ರಾಘವೇಂದ್ರ ಅವರೊಂದಿಗೆ ಇಂದೇ ಭೇಟಿ ಮಾಡಿ ಮಾತನಾಡುವುದಾಗಿ ತಿಳಿಸಿದರು.
ಈಡಿಗ ಸಮುದಾಯದ ಆಡಳಿತ ಮಂಡಳಿಯಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಸರಕಾರದ ಸಮಿತಿ ಬಗ್ಗೆ ಜಿಲ್ಲೆ ಹಾಗೂ ರಾಜ್ಯದ ಭಕ್ತರ ಮನಸ್ಸಿಗೆ ನೋವಾಗಿದೆ. ಧಾರ್ಮಿಕ ಕೇಂದ್ರದ ಮೇಲೆ ಸರಕಾರದ ಹಸ್ತಕ್ಷೇಪ ಸರಿಯಲ್ಲ. ಜಿಲ್ಲಾಧಿಕಾರಿ ನೀಡಿರುವ ವರದಿ ಏಕಮುಖವಾಗಿದೆ. ಅಗತ್ಯಬಿದ್ದರೆ ಸಮುದಾಯದ ಜನರೊಮದಿಗೆ ಹೋರಾಟ ಮಾಡಲು ಸಿದ್ಧ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ,ಸಿಗಂದೂರು ದೇವಾಲಯದ ವಿಚಾರದಲ್ಲಿ ಸ್ಥಳೀಯ ಶಾಸಕರು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಹಗುರವಾಗಿ ಬಗೆಹರಿಸಬಹುದಾಗಿದ್ದ ಸಮಸ್ಯೆಯನ್ನು ಗಂಭೀರ ಮಾಡಿದ್ದಾರೆ. ಈಡಿಗ-ಬ್ರಾಹ್ಮಣ ಸಮುದಾಯ ಸಾಗರ ಕ್ಷೇತ್ರದಲ್ಲಿ ಯಾವತ್ತೂ ಅನೋನ್ಯವಾಗಿತ್ತು. ಈಗ ಕಂದಕ ಸೃಷ್ಟಿಸುವ ಕೆಲಸ ಆಗುತ್ತಿದೆ. ದೇವಾಲಯದ ಆಡಳಿತ ಮೊದಲಿನಂತೆಯೇ ಇರಬೇಕು. ಸರಕಾರ ಕೂಡಲೇ ಸಮಿತಿ ರದ್ದು ಮಾಡಬೇಕು ಎಂದರು.
ರಾಮಚಂದ್ರಾಪುರ ಮಠದ ಗುರುಗಳ ಪರವಾಗಿ ನಾವು ಹೋರಾಟ ಮಾಡಿದ್ದೇವೆ ಅವರೇ ಶೇಷಗಿರಿ ಭಟ್ಟರಿಗೆ ಬುದ್ದಿ ಹೇಳಬೇಕು. ಸರಕಾರ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದಲಿತರು ,ಬ್ರಾಹ್ಮಣರು ಸೇರಿದಂತೆ ಎಲ್ಲ ಭಕ್ತರನ್ನು ಸೇರಿಸಿ ಹೋರಾಟ ಮಾಡುವುದಾಗಿ ಬೇಳೂರು ಹೇಳಿದರು.
ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಕಲಗೋಡು ರತ್ನಾಕರ್, ಸಾಗರ ಎಪಿಎಂಸಿ ಅಧ್ಯಕ್ಷ ಬಂಡಿರಾಮಚಂದ್ರ, ಜಿ.ಪಂ.ಸದಸ್ಯೆ ಶ್ವೇತಾ ಬಂಡಿ, ಈಡಿಗ ಮಹಿಳಾ ಸಂಘದ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರೇಯ, ಪ್ರಮುಖರಾದ ಸುರೇಶ್ ಕೆ.ಬಾಳೇಗುಂಡಿ, ಪ್ರವೀಣ್ ಹಿರೇಗೋಡು,ವೀಣಾ ವೆಂಕಟೇಶ್ ಎಲ್ಲಾ ತಾಲೂಕುಗಳ ಆರ್ಯ ಈಡಿಗರ ಸಂಘದ ಅದ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಕ್ಷಮೆ ಕೇಳಲು ಬೇಳೂರು ಆಗ್ರಹ
ಜಿಲ್ಲೆಯ ಬಹುಸಂಖ್ಯಾತ ಈಡಿಗ ಸಮುದಾಯವನ್ನು ಪ್ರತಿನಿಧಿಸುವ ಜಿಲ್ಲಾ ಆರ್ಯ ಈಡಿಗ ಸಂಘವನ್ನು ಸ್ವಘೋಷಿತ ಸಂಘ ಎಂದು ಹೇಳಿರುವ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಕ್ಷಮೆ ಕೇಳಬೇಕೆಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದರು.
ಸಿಗಂದೂರು ದೇವಸ್ಥಾನಕ್ಕೆ ಮೇಲ್ವಿಚಾರಣ ಮತ್ತು ಸಲಹಾ ಸಮಿತಿ ರಚಿಸಿರುವುದನ್ನು ವಿರೋಧಿಸಿ ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಸಂದರ್ಭ ಮಾತನಾಡಿದ ಬೇಳೂರು, ಯಾರೊ ಹೇಳಿದ್ದನ್ನು ಕೇಳಿಕೊಂಡು ಜಿಲ್ಲಾಧಿಕಾರಿಗಳು ಈ ರೀತಿಯ ಹೇಳಿಕೆ ನೀಡಬಾರದಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಿಂದುಳಿದ ಸಮುದಾಯದ ದೇವಸ್ಥಾನಗಳ ಮೇಲೆ ಸವಾರಿ ಮಾಡದೆ ಈಗಿನ ಸಮಿತಿ ರದ್ದುಮಾಡಿ ಭಕ್ತರ ಭಾವನೆಗೆ ಗೌರವ ನೀಡಬೇಕು. ಸರಕಾರ ನಮ್ಮ ಮನವಿ ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.