ಶಿವಮೊಗ್ಗ ಜೂನ್ 28
ಜಿಲ್ಲೆಯಲ್ಲಿ ವಾಡಿಕೆ ಪ್ರಮಾಣದ ಮಳೆ ಕೊರತೆಯ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ಕೊರತೆ ಉಂಟಾಗಿದ್ದು , ನೀರಿನ ಕೊರತೆಯನ್ನು ನೀಗಿಸಲು ಸ್ಥಳೀಯ ಜಲಮೂಲಗಳನ್ನು ಬಳಸಿಕೊಳ್ಳುವಂತೆ ಹಾಗೂ ಅಗತ್ಯವಿರುವಲ್ಲಿ ಟ್ಯಾಂಕರ್ ಗಳ ಮೂಲಕ ನೀರನ್ನು ಸರಬರಾಜು ಮಾಡುವಂತೆ ರಾಜ್ಯ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ತೀರ್ಥಹಳ್ಳಿಯ ತಾಲೂಕು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಪ್ರಸಕ್ತ ಸಾಲಿನ ಶಿಕ್ಷಕರ ವರ್ಗಾವಣೆಗೆ ಸುಮಾರು 87000 ಶಿಕ್ಷಕರು ಅರ್ಜಿ ಸಲ್ಲಿಸಿದ್ದು , ಅದರಲ್ಲಿ 25000 ಶಿಕ್ಷಕರು ವರ್ಗಾವಣೆ ಯಾಗಲಿದ್ದಾರೆ. ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಅಡಚಣೆಯಾಗದಂತೆ ಈ ಪ್ರಕ್ರಿಯೆ ನಡೆಯಲಿದೆ ಎಂದರು.
ರಾಜ್ಯದಲ್ಲಿ ಸುಮಾರು 57000 ಶಿಕ್ಷಕರ ಹುದ್ದೆ ಖಾಲಿ ಇದ್ದು, ತಕ್ಷಣದ ಕ್ರಮವಾಗಿ ಹಾಗೂ ನ್ಯಾಯಾಲಯದ ಸೂಚನೆಯಂತೆ 13000 ಶಿಕ್ಷಕರ ನೇಮಕಾತಿಗೆ ಕ್ರಮ ವಹಿಸಲಾಗಿದೆ ಎಂದರು.
ಈ ಶಿಕ್ಷಕರ ನೇಮಕಾತಿಯಲ್ಲಿ ಅತಿ ಜೆಚ್ಚಿನ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ನೇಮಕಗೊಳ್ಳುತ್ತಿರುವುದು ವಿಶೇಷ. ಅಲ್ಲದೆ ಶಿಕ್ಷಕರ ಕೊರತೆಯನ್ನು ನೀಗಿಸಲು ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.
ಗ್ರಾಮೀಣ ಶಾಲೆಗಳ ಸಮಸ್ಯೆಯನ್ನು ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ಪೋಷಕರು ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಮತ್ತು ಅಧಿಕಾರಿಗಳ ಸಲಹೆ ಪಡೆದು ಸರಿಪಡಿಸಲು ಯತ್ನಿಸಲಾಗುವುದು ಎಂದರು.
ಮಳೆಹಾನಿ ಸಂದರ್ಭಗಳಲ್ಲಿ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಮಾನವೀಯ ನೆಲೆಯಲ್ಲಿ ಸಂತ್ರಸ್ಥರ ನೆರವಿಗೆ ಧಾವಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಯಾವುದೆ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ, ಬಿಸಿಯೂಟ ಕಾರ್ಯಕ್ರಮ ಅನುಷ್ಠಾನದಲ್ಲಿ ಸ್ವಚ್ಚತೆ ಕಾಪಾಡುವಂತೆ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ ಸಚಿವರು ಅರಣ್ಯಭೂಮಿಯಲ್ಲಿ ರೈತರು ಬೆಳೆದ ಬೆಳೆಯನ್ನು ನಾಶಪಡಿಸದಂತೆ ಹಾಗೂ ಅವರನ್ನು ಒಕ್ಕಲೆಬ್ಬಿಸದಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಶಾಸಕ ಜ್ಞಾನೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.