Site icon TUNGATARANGA

ಜು.08 ರಂದು ಕೇಂದ್ರ ಸರ್ಕಾರ ನೀಡಿದ್ದ ಭರವಸೆ ಜಾರಿಗೊಳಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ :ಮಾಜಿ ಸಚಿವ ಕಿಮ್ಮನೆ ರತ್ನಾಕರ್

ಪ್ರಸ್ತುತ ರಾಜ್ಯ ಕಾಂಗ್ರೆಸ್ ಸರಕಾರ ಈ ಬಾರಿಯ ವಿಧಾನಸಭಾ ಚುನಾವಣೆ ವೇಳೆ ಜನತೆ ನೀಡಿದ್ದ ಐದು ಗ್ಯಾರೆಂಟಿ ಭರವಸೆಗ ಳನ್ನು ಈಡೇರಿಸಲು ಕಟ್ಟಿಬದ್ದವಾಗಿದೆ. ಆದರೆ, ರಾಜ್ಯದ ಆರ್ಥಿಕ ಸ್ಥಿತಿ ನೋಡಿಕೊಂಡು ಪ್ರತಿಯೊಂದು ಭರವಸೆಯನ್ನು ಜನತೆಗೆ ನೀಡಲು ರಾಜ್ಯ ಕಾಂಗ್ರೆಸ್ ಸರಕಾರ ಮುಂದಾಗಿದೆ. ಇದಕ್ಕಾಗಿ ಮೂರ‍್ನಾಲ್ಕು ತಿಂಗಳ ಕಾಲಾವಕಾಶ ಬೇಕಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.


ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಕೇವಲ ತಿಂಗಳು ಕಳೆದಿದೆ. ಹಂತ ಹಂತವಾಗಿ ಸರಕಾರ ಜನತೆಗೆ ನೀಡಿದ ಆಶ್ವಾಸನೆಗಳ ಈಡೇರಿಕೆ ಕ್ರಮಕೈಗೊಳ್ಳುತ್ತಿದೆ. ಆದರೆ, ಬಿಜೆಪಿಯವರು ಜನತೆ ಹಾಗೂ ಸರಕಾರದ ನಡುವೆ ವಿನಾ:ಕಾರಣ ಗೊಂದಲ ಮೂಡಿ ಸಲು ಪ್ರಯತ್ನ ನಡೆಸಿದೆ. ಆದರೆ, ಇದು ಖಂಡಿತ ಯಶಸ್ವಿ ಆಗದು. ಕೇಂದ್ರದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ನಾಲ್ಕುವರೆ ವರ್ಷಗಳೇ ಕಳೆದಿದೆ.

ಅದು ಜನತೆಗೆ ನೀಡಿದ ನೂರಾರು ಭರವಸೆಗಳು ಜನತೆಗೆ ಇಂದಿಗೂ ತಲುಪಿಲ್ಲ. ಪೆಟ್ರೋಲ್, ಗ್ಯಾಸ್ ಸೇರಿದಂತೆ ದಿನನಿತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಬೆಲೆ ನಿಯಂತ್ರಿಸುವಲ್ಲಿ ಬಿಜೆಪಿ ಸರಕಾರ ವಿಫಲ ವಾಗಿದೆ. ಕಪ್ಪು ಹಣ ನಿಯಂತ್ರಿಸಿ ಪ್ರತಿಯೊಬ್ಬ ನಾಗರೀಕನಿಗೂ ತಲಾ ೧೫ ಲಕ್ಷ ಹಣ ಬ್ಯಾಂಕ್ ಖಾತೆಗೆ ಜಮಾ ಮಾಡುವುದು, ೧೮ ಕೋಟಿ ನೌಕರಿ ಸೃಷ್ಠಿಸುವುದು ಸೇರಿದಂತೆ ಹಲವು ಆಶ್ವಾಸನೆಗಳು ಇಂದಿಗೂ ಜನತೆಗೆ ಗಗನಕುಸುಮವೇ ಆಗಿದೆ. ಈ ಎಲ್ಲಾ ಭರವಸೆಗಳನ್ನು ಈಡೇರಿಸಲು ಕೇಂದ್ರದ ಬಿಜೆಪಿ ಸರಕಾರ ಕೂಡಲೇ ಮುಂದಾಗಬೇಕು.

ಗ್ಯಾರೆಂಟಿ ವಿಳಂಬ ಹಿನ್ನಲೆಯಲ್ಲಿ ರಾಜ್ಯದ ಜನರನ್ನು ದಿಕ್ಕು ತಪ್ಪಿಸುತ್ತಿರುವ ಬಿಜೆಪಿ ಕ್ರಮವನ್ನು ವಿರೋಧಿಸಿ, ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳನ್ನು ಕೂಡಲೇ ಜಾರಿಗೊ ಳಿಸುವಂತೆ ಒತ್ತಾಯಿಸಿ ಜುಲೈ ೮ರಂದು ತೀರ್ಥಹಳ್ಳಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾ ಗಿದ್ದು, ಈ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದರು.


ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಮಾಜಿ ತಾ.ಪಂ. ಸದಸ್ಯರಾದ ಎರಗಿ ಉಮೇಶ್, ಚಂದ್ರಮೌಳಿ, ಪ.ಪಂ. ಸದಸ್ಯ ಅಶ್ವಿನಿ ಕುಮಾರ್, ಹಾಲಗದ್ದೆ ಉಮೇಶ್ ಸೇರಿದಂತೆ ಪಕ್ಷದ ಪ್ರಮುಖರಾದ ಮಹಾಬಲರಾವ್, ಪ್ರಭಾಕರ್, ಕರುಣಾಕರ ಶೆಟ್ಟಿ, ಜಯನಗರ ಗುರುಪ್ರಸಾದ್, ಅಶೋಕ್, ಲೇಖನಮೂರ್ತಿ ಮೊದಲಾದವರು ಇದ್ದರು.

Exit mobile version