ಹೊಸನಗರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಲಿದ್ದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಮೋದಿ ಸರ್ಕಾರ 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪಟ್ಟಣದ ಗಾಯಿತ್ರಿ ಮಂದಿರದಲ್ಲಿ ಗುರುವಾರ ಬಿಜೆಪಿ ಪಕ್ಷ ಏರ್ಪಡಿಸಿದ್ದ ವರ್ತಕರ ಸಮಾವೇಶದಲ್ಲಿ ಅವರು ಮಾತನಾಡಿದರು.
ದೇಶದ 80 ಕೋಟಿ ಜನತೆಗೆ ಕೇಂದ್ರ ಸರಕಾರ ಆಹಾರ ಭದ್ರತಾ ಕಾಯ್ದೆಯಡಿ ಉಚಿತವಾಗಿ ಪಡಿತರ ವಿತರಣೆ ಮಾಡುತ್ತಿದೆ. ಆದರೆ ಚುನಾವಣಾ ಆಶ್ವಾಸನೆ ನೀಡಿ ಅಧಿಕಾರಕ್ಕೇರಿದ ರಾಜ್ಯ ಕಾಂಗ್ರೆಸ್ ಈಗ ಗ್ಯಾರಂಟಿ ಈಡೇರಿಸಲು ವಿಫಲವಾಗಿದೆ. ಹತ್ತಾರು ಷರತ್ತು ವಿಧಿಸಿ ಯೋಜನೆ ಜನ ಸಾಮಾನ್ಯರಿಗೆ ತಲುಪದಂತೆ ಮಾಡಲಾಗತ್ತಿದೆ. ಹೆಚ್ಚುವರಿ 10 ಕೆಜಿ ಅಕ್ಕಿ ಕೊಡುವ ಮಾತಿಗೆ ಕಾಂಗ್ರೆಸ್ ಪಕ್ಷ ಬದ್ಧವಾಗಬೇಕು ತಪ್ಪಿದಲ್ಲಿ ಬಿಜೆಪಿ ಉಗ್ರ ಹೋರಾಟ ನಡೆಸಲಿದೆ ಎಂದರು.
ಬಿಜೆಪಿ ರಚನಾತ್ಮಕವಾಗಿ ವಿರೋಧ ಪಕ್ಷದ ಕೆಲಸ ಮಾಡಲಿದೆ. ಸೋಲಿನಿಂದ ದೃತಿಗೆಟ್ಟಿಲ್ಲ. ಹೋರಾಟದ ಮೂಲಕವೇ ಬಿಜೆಪಿ ಹೊರಹೊಮಿದ್ದು, ಸೋಲು ಹೊಸತೇನಲ್ಲ. ಜನಪರ ಕಾಳಜಿಯಿಂದ ಕೆಲಸ ಮಾಡಲಿದ್ದೇವೆ ಎಂದರು. ಕೇಂದ್ರ ಸರ್ಕಾರ ಆರ್ಟಿಕಲ್ 370 ರದ್ದತಿ, ರಾಮಮಂದಿರ ನಿರ್ಮಾಣ, 25 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ರೈಲ್ವೆ ವಿದ್ಯುದೀಕರಣದಂತ ಮಹತ್ವದ ಯೋಜನೆಗಳು ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನೆರವೇರಿದೆ. ವಸತಿ, ಕುಡಿಯುವ ನೀರು ವ್ಯವಸ್ಥೆ ಕಲ್ಪಿಸುವ ಹಾಗೂ ಹಸಿವು ಮುಕ್ತ ದೇಶವನ್ನಾಗಿಸುವ ನಿಟ್ಟಿನಲ್ಲಿ ದೇಶದ 80 ಕೋಟಿ ಜನತೆ ಉಚಿತ ಪಡಿತರ ಪಡೆಯುತ್ತಿದ್ದಾರೆ. ಭಾರತವನ್ನು ಸುಭದ್ರದೇಶವನ್ನಾಗಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರದ ಹೆಗ್ಗಳಿಕೆ ಎಂದರು. ದೇಶದ ಹಿತದೃಷ್ಠಿಯಿಂದ ಬಿಜೆಪಿ ಮತ್ತೆ ಅಧಿಕಾರ ಹಿಡಿಯಬೇಕಿದೆ. ಕಾರ್ಯಕರ್ತರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ ಎಂದರು.
ಹೊಸನಗರ-ಸಾಗರ ಕ್ಷೇತ್ರದಲ್ಲಿ ಪುಡಾರಿಗಳ ರಾಜಕಾರಣ : ಹೆಚ್ ಹಾಲಪ್ಪ ಮಾಜಿ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ನೂತನ ಶಾಸಕರ ಬೆಂಬಲಿಗರ ಉಪಟಳ ಹೆಚ್ಚಾಗಿದೆ. ರೈತರ ಭೂಮಿಯ ಒತ್ತುವರಿ ತೆರೆವುಗೊಳಿಸಲು ಶಾಸಕರ ಆಪ್ತರೇ ಮುಂದೆ ನಿಲ್ಲುತ್ತಿದ್ದಾರೆ. ರೈತಪರ ಕಾಳಜಿ ಎಂದು ಹೇಳುತ್ತಿದ್ದ ಕಾಗೋಡು ತಿಮ್ಮಪ್ಪ ಅವರು ಈಗ ಏನು ಮಾಡುತ್ತಿದ್ದಾರೆ. ಪುಡಾರಿಗಳ ರಾಜಕಾರಣ ನಡೆಯುತ್ತಿದೆ. ಎಲ್ಲವನ್ನೂ ಗಮನಿಸುತ್ತಿದ್ದೇನೆ. ಕನಿಷ್ಟ 100 ದಿನಗಳು ಕಾಂಗ್ರೆಸ್ ಆಡಳಿತ ಕಳೆಯಲಿ ಎಂದು ಕಾಯುತ್ತಿದ್ದೇನೆ. ಎಲ್ಲವನ್ನೂ ಜನತೆಯ ಮುಂದಿಡಲಿದ್ದೇನೆ ಮತ್ತು ಹೋರಾಟ ಮಾಡಲು ಸಿದ್ಧರಾಗುತ್ತೇವೆ ಎಂದು ವಾಗ್ದಾಳಿ ನಡೆಸಿದರು.
ಸಭೆಯಲ್ಲಿ ಪಕ್ಷದ ಪ್ರಮುಖರಾದ ಅಶೋಕಮೂರ್ತಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿಳಗೋಡು ಗಣಪತಿ, ಡಾ. ಧನಂಜಯ ಸರ್ಜಿ, ಉಮೇಶ್ ಕಂಚುಗಾರ್, ಹರಿಕೃಷ್ಣ, ಬಿ.ಗುರುರಾಜ್, ಯುವರಾಜ್, ಎನ್.ಆರ್. ದೇವಾನಂದ, ಎ.ವಿ.ಮಲ್ಲಿಕಾರ್ಜುನ, ಬಿಜೆಪಿ ಮುಖಂಡರಾದ ತೀರ್ಥೇಶ, ಎನ್ ಶ್ರೀಧರ ಉಡುಪ, ಎಸ್.ಹೆಚ್. ನಿಂಗಮೂರ್ತಿ, ಎಂ.ಎನ್ ಸುಧಾಕರ್, ವಿಜಯಕುಮಾರ್, ಸತ್ಯನಾರಾಯಣ ವಿ, ಸೋಮಣ್ಣ, ಆರ್.ಟಿ.ಗೋಪಾಲ್, ನಾಗಾರ್ಜುನ ಸ್ವಾಮಿ ಮತ್ತಿತರರು ಇದ್ದರು.