Site icon TUNGATARANGA

ವೈದ್ಯರ ನಿರ್ಲಕ್ಷ್ಯ ; ಇಂಜೆಕ್ಷನ್ ನೋವಿನಿಂದ ಕಾಲು ಕಳೆದುಕೊಳ್ಳುವ ಭೀತಿಯಲ್ಲಿ ಬಾಲಕಿ !

ಹೊಸನಗರ : ತಾಲೂಕಿನ ನಗರ ಸಮೀಪದ ಬೈಸೆ ಗ್ರಾಮದ ಬಡ ಕೂಲಿ ಕಾರ್ಮಿಕ ಕುಟುಂಬದ ವ್ಯಥೆ ಇದು. ಏಳು ವರ್ಷದ ಬಾಲಕಿ ಕಳೆದ 22 ದಿನಗಳಿಂದ ಶಾಲೆಗೆ ಹೋಗಲಾಗದ ಸ್ಥಿತಿಯಲ್ಲಿದ್ದಾಳೆ. ಇಂಜೆಕ್ಷನ್ ನಂತರ ಉಂಟಾದ ನೋವಿನಿಂದ ಕಾಲು ಕಳೆದು ಕೊಳ್ಳುವ ಭೀತಿಯಲ್ಲಿದ್ದಾಳೆ.

ಇಲ್ಲಿನ ಸುಳುಗೋಡಿನ ಅಂಬಿಕಾ ಮತ್ತು ಸುಂದರ ದಂಪತಿಗಳ ಮಗಳು ಶ್ರವಂತಿಯ ದಾರುಣ ಸ್ಥಿತಿ ಇದು. ಎರಡನೇ ತರಗತಿ ವಿದ್ಯಾಭ್ಯಾಸ ನಡೆಸುತ್ತಿರುವ ಶ್ರವಂತಿಗೆ ಮೇ.29 ರಂದು ಜ್ವರ ಕಾಣಿಸಿಕೊಂಡಿತ್ತು. ಅದೇ ರಾತ್ರಿ ನಗರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದಾರೆ. ವೈದ್ಯರು ಆರೋಗ್ಯ ತಪಾಸಣೆಯ ಬಳಿಕ ಮಗುವಿನ ಸೊಂಟಕ್ಕೆ ಇಂಜೆಕ್ಷನ್ ನೀಡಿದ್ದಾರೆ.

ಬಳಿಕ ಬಾಲಕಿ ಕಾಲು ಊರಲು ಸಾಧ್ಯವಾಗದೇ. ಇರುವೆ ಹರಿದ ಹಾಗೆ ಆಗುತ್ತದೆ ಎಂದು ರೋಧಿಸಿದ್ದಾಳೆ. ಇದು ಸರಿಯಾಗುತ್ತದೆ ಎಂದು ವೈದ್ಯರು ಹೇಳಿದ್ದರಿಂದ ಮನೆಗೆ ಕರೆದುಕೊಂಡು ಬಂದಿದ್ದಾರೆ.

.

ಆಸ್ಪತ್ರೆಯಿಂದ ಮನೆಗೆ ಬಂದು ರಾತ್ರಿ ಕಳೆದು ಬೆಳಗಾದರೂ ಬಾಲಕಿ ಕಾಲು ಊರಲಾಗದೆ ನರಳಿದ್ದಾಳೆ. ಆತಂಕಗೊಂಡ ಪೋಷಕರು ಮತ್ತೆ ನಗರ ಸರ್ಕಾರಿ ಆಸ್ಪತ್ರೆಗೆ ಮಗಳನ್ನು ಕರೆತಂದಿದ್ದಾರೆ. ವೈದ್ಯರ ಸೂಚನೆ ಮೇರೆಗೆ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ 5 ದಿನ ಚಿಕಿತ್ಸೆ ನೀಡಲಾಗಿದೆ. ಶ್ರವಂತಿಯ ಕಾಲಿನಲ್ಲಿ ಯಾವುದೇ ಚೇತರಿಕೆ ಕಂಡಿಲ್ಲ. ಮತ್ತೆ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ 4 ದಿನ ಚಿಕಿತ್ಸೆ ಕೊಡಿಸಲಾಗಿದೆ. ಆದರೂ ಚಿಕಿತ್ಸೆ ಫಲಕಾರಿಯಾಗದೇ ಬಡ ಕುಟುಂಬ ಚಿಂತೆಗೀಡಾಗಿದೆ.

ಜೂನ್ 1 ರಿಂದ ಶಾಲೆ ಆರಂಭವಾಗಿದ್ದು ಶಾಲೆಗೆ ಹೋಗಲಾಗದೆ ಶ್ರವಂತಿ ಪರಿತಪಿಸುತ್ತಿದ್ದಾಳೆ. ಶಾಲೆಗೆ ಹೋಗುವ ತಯಾರಿಯಲ್ಲಿದ್ದ ಮಗುವಿಗೆ ನಡೆಯಲಾಗದೇ ಮನೆಯಲ್ಲೇ ಕೂರುವಂತಾಗಿದೆ. ವೈದ್ಯರು ಸ್ಪಂದಿಸಿ ಚಿಕಿತ್ಸೆ ನೀಡಿದ್ದರು.

ಆಸ್ಪತ್ರೆಗೆ ಒಳ ಹೋಗುವಾಗ ನಡೆದುಕೊಂಡು ಹೋಗಿದ್ದ ಬಾಲಕಿ ವಾಪಾಸು ಬರುವಾಗ ನಡೆಯುತ್ತಿರಲಿಲ್ಲ. ಅವರು ನೀಡಿದ ಇಂಜೆಕ್ಷನ್ ಯಾವುದು, ಚಿಕಿತ್ಸೆ ಹೇಗೆ ಮಾಡಿದ್ದಾರೆ ನಮಗೆ ಗೊತ್ತಿಲ್ಲ. ಆದರೆ ಬಾಲಕಿಯ ಒಂದು ಕಾಲು ಸ್ವಾಧೀನ ಇಲ್ಲ ಎಂದು ಪೋಷಕರು ಗೋಳಿಡುತ್ತಿದ್ದಾರೆ.

Exit mobile version