Site icon TUNGATARANGA

ಫುಟ್‌ಪಾತ್‌ಗಳಲ್ಲಿ ಸಣ್ಣ ವ್ಯಾಪಾರಸ್ಥರಿಂದ ಹಿಡಿದು ಮಾಲ್‌ನಂತಹ ದೊಡ್ಡ ವ್ಯಾಪಾರಿಗಳದ್ದೇ ಕಾರುಬಾರು |ಕಂಡು ಕಾಣದಂತಿರುವ ಅಧಿಕಾರಿಗಳು ವಿರುದ್ದ ಅಕ್ರೋಶ | ತಕ್ಷಣ ಕ್ರಮಕೈಗೊಳ್ಳುವಂತೆ ಸಾರ್ವಜನಿಕರ ಒತ್ತಾಯ

ಶಿವಮೊಗ್ಗ: ನಗರದ ಸ್ಮಾರ್ಟ್ ಫುಟ್‌ಪಾತ್‌ಗಳೆಲ್ಲಾ ವ್ಯಾಪಾರಸ್ಥರ ಮಳಿಗೆಗಳಾಗಿ ಮಾರ್ಪಟ್ಟಿದ್ದು, ಪಾದಚಾರಿಗಳು ಫುಟ್‌ಪಾತ್ ಬಿಟ್ಟು ರಸ್ತೆಯಲ್ಲಿಯೇ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲ ಗೊತ್ತಿದ್ದೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿಕೊಂಡು ಸುಮ್ಮನೆ ಕುಳಿತಿದ್ದಾರೆ.


ಒಂದು ಕಡೆ ಸ್ಮಾರ್ಟ್ ಸಿಟಿ ಕಾಮಗಾರಿಗಳೇ ಕಳಪೆಯಾಗಿದ್ದರೆ, ಇನ್ನೊಂಡು ಕಡೆ ಫುಟ್‌ಪಾತ್‌ಗಳನ್ನು ಸಣ್ಣ ಸಣ್ಣ ವ್ಯಾಪಾರಸ್ಥರಿಂದ ಹಿಡಿದು ಮಾಲ್‌ನಂತಹ ದೊಡ್ಡ ವ್ಯಾಪಾರಿಗಳು ಸಹ ಫುಟ್‌ಪಾತ್ ಆಕ್ರಮಿಸಿಕೊಂಡು ಪಾದಚಾರಿಗಳ ಓಡಾಟದ ಹಕ್ಕನ್ನೇ ಕಸಿದುಕೊಂಡಿದ್ದಾರೆ. ಇಡೀ ನಗರದಲ್ಲಿನ ಫುಟ್‌ಪಾತ್‌ಗಳನ್ನು ವ್ಯಾಪಾರಸ್ಥರು ರಾಜಾರೋಷವಾಗಿ ಆಕ್ರಮಿಸಿಕೊಂಡಿದ್ದಾರೆ. ಮೋರ್, ರಿಲೈಯನ್ಸ್‌ನಂತಹ ಮಾಲೀಕರು ಕೂಡ ತಮ್ಮ ಅಂಗಡಿಗಳ ಒಳಗೆ ಬೇಕಾದಷ್ಟು ಜಾಗವಿದ್ದರೂ ಫುಟ್‌ಪಾತ್‌ನಲ್ಲಿಯೇ ತರಕಾರಿ, ಹಣ್ಣು, ಅಕ್ಕಿ, ರಾಗಿ ಮೂಟೆಳನ್ನು ಇಟ್ಟು ಮಾರಾಟ ಮಾಡುತ್ತಿದ್ದಾರೆ.


ಮಹಾನಗರ ಪಾಲಿಕೆಯಂತೂ ಈ ವಿಷಯದಲ್ಲಿ ಜಾಣಕುರುಡುತನ ಪ್ರದರ್ಶಿಸುತ್ತಿದೆ. ಸ್ಮಾರ್ಟ್ ಸಿಟಿ ಅಧಿಕಾರಿಗಳು ತಮ್ಮ ಕಳಪೆ ಕಾಮಗಾರಿಯನ್ನು ಈ ವ್ಯಾಪಾರಸ್ಥರು ಸ್ವಲ್ಪವಾದರೂ ತಮ್ಮ ಕಳಪೆಯನ್ನು ಮುಚ್ಚಿದ್ದಾರೆ ಎಂದು ಸಮಧಾನದಿಂದ ಇದ್ದಾರೆ. ಉಷಾ ನರ್ಸಿಂಗ್ ಹೋಂನಿಂದ ಆಲ್ಕೊಳ ಸರ್ಕಲ್, ಅಲ್ಲಿಂದ ಗೋಪಾಲಗೌಡ ಬಡಾವಣೆಯ ಎರಡೂ ಬದಿಗೆ ಹೋಟೆಲ್‌ಗಳು, ಮಾಲ್‌ಗಳು, ಚಿಕ್ಕಪುಟ್ಟ ಬೀದಿ ವ್ಯಾಪಾರಸ್ಥರು ಇದ್ದಾರೆ. ಇವರೆಲ್ಲರಿಗೂ ಈ ಫುಟ್‌ಪಾತೇ ಆಶ್ರಯ ತಾಣವಾಗಿದೆ. ಫುಟ್ ಪಾತ್ ಕೂಡ ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವುದರಿಂದ ಮತ್ತು ಈ ಅಂಗಡಿಗಳ ಮುಂದೆ ವಾಹನಗಳ ನಿಲುಗಡೆ ಆಗುವುದರಿಂದ ರಸ್ತೆಯೇ ಅತ್ಯಂತ ಚಿಕ್ದಾಗಿ ಪಾದಚಾರಿಗಳು ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ಅನೇಕ ಬಾರಿ ಚಿಕ್ಕಪುಟ್ಟ ಅಪಘಾತಗಳು ನಡೆದ ಉದಾಹರಣೆ ಇದೆ.


ನಗರದ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣದ ಒಳಗಡೆ ರಿಲೈಯನ್ಸ್ ದೊಡ್ಡ ಮಳಿಗೆಯೊಂದಿದೆ. ಬಸ್ ಸ್ಟ್ಯಾಂಡ್ ಹೇಳಿಕೇಳಿ ಜನನಿಬಿಡ ಸ್ಥಳವಾಗಿದೆ. ಆದರೆ ಈ ಅಂಗಡಿಯ ಗುತ್ತಿಗೆದಾರನು ಕೂಡ ಬಸ್‌ಸ್ಟ್ಯಾಂಡಿನ ಒಳಗೆಯೇ ತರಕಾರಿ ಸೇರಿದಂತೆ ವಿವಿಧ ವಸ್ತುಗಳನ್ನು ಹೊರಗಡೆಯೇ ಮಾರಾಟ ಮಾಡುತ್ತಿದ್ದಾರೆ. ನಿಲ್ದಾಣವೇ ಇಲ್ಲಿ ಇಕ್ಕಟ್ಟಾದಂತೆ ಕಾಣುತ್ತದೆ. ಅಲ್ಲಿನ ಗುತ್ತಿಗೆದಾರನಿಗೆ ಒಳಗಡೆ ವ್ಯಾಪಾರ ಮಾಡಬೇಕೇ ಹೊರತು ನಿಲ್ದಾಣದಲ್ಲಲ್ಲ. ಒಂದುಪಕ್ಷ ಹೊರಗಡೆ ಮಾರಾಟ ಮಾಡಲು ಅವಕಾಶ ಕೊಟ್ಟಿದ್ದರೆ ಅದು ಕೂಡ ತಪ್ಪಾಗುತ್ತದೆ. ಸಾವಿರಾರುಜನರು ಇಲ್ಲಿ ಓಡಾಡುತ್ತಿದ್ದರೂ ಕೂಡ ಸಂಬಂಧಪಟ್ಟ ಯಾವ ಅಧಿಕಾರಿಗಳೂ ಕೂಡ ಈಬಗ್ಗೆ ಗಮನಹರಿಸಿಲ್ಲ. ತಕ್ಷಣವೇ ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.


ಸಂಜೆಯಾಗುತ್ತಿದ್ದಂತೆ ಫುಟ್‌ಪಾತ್‌ಗಳಲ್ಲಿ ಬೀದಿ ಬದಿ ವ್ಯಾಪಾರಿಗಳದ್ದೇ ಕಾರುಬಾರು. ಬಿಹೆಚ್ ರಸ್ತೆ ಮತ್ತು ವಿನೋಬನಗರದ ಪೊಲೀಸ್ ಚೌಕಿಯಿಂದ ಲಕ್ಷ್ಮೀ ಚಿತ್ರಮಂದಿರದವರೆಗೂ ಕೂಡ ಎರಡೂ ಕಡೆ ಫುಟ್ ಪಾತ್‌ಗಳಲ್ಲಿ ಹಣ್ಣಿನ ಅಂಗಡಿ, ತರಕಾರಿ, ಹೋಟೆಲ್ ವ್ಯಾಪಾರಸ್ಥರು, ತಿಂಡಿಗಾಡಿಗಳು, ಪಾನಿಪೂರಿ ಹೀಗೆ ಮಾಂಸಹಾರಿ ಗಾಡಿಗಳೂ ಕೂಡ ಎಗ್ಗಿಲ್ಲದೆ ವ್ಯಾಪಾರ ಮಾಡುತ್ತಿವೆ.


ಇದಲ್ಲದೆ ಕನ್ಸರ್ವೆನ್ಸಿಗಳಲ್ಲಿ ಕೂಡ ಮಳಿಗೆಗಳು, ಗ್ಯಾರೇಜುಗಳು, ವರ್ಕ್‌ಶಾಪ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಸ್ಮಾರ್ಟ್ ಸಿಟಿಯ ಸೊಗಸೇ ಹಾಳಾಗಿದೆ. ಕೆಲವರು ತಮ್ಮ ಮನೆಗಳನ್ನು ಕೂಡ ಒತ್ತುವರಿ ಮಾಡಿಕೊಂಡಿದ್ದಾರೆ. ಗಾರ್ಡನ್ ಏರಿಯಾದಲ್ಲಂತೂ ಓಡಾಡುವುದೇ ಕಷ್ಟವಾಗಿದೆ. ಲೋಡಿಂಗ್ ಅನ್‌ಲೋಡಿಂಗ್ ವಾಹನಗಳು ರಸ್ತೆಯಲ್ಲಿಯೇ ನಿಲ್ಲುವುದರಿಂದ ವಾಹನಗಳ ಮತ್ತು ಪಾದಚಾರಿಗಳ ಸುಗಮ ಸಂಚಾರಕ್ಕೆ ತೊಂದರೆಯಾಗಿ ಪರಿಣಮಿಸಿದೆ.


ಅದೇರೀತಿ ವಿದ್ಯಾನಗರದ ಮುಖ್ಯರಸ್ತೆ ಮತ್ತು ಸಹ್ಯಾದ್ರಿ ಕಾಲೇಜು ಎದುರಿನ ರಸ್ತೆಗಳಲ್ಲಿ ಬೆಳಿಗ್ಗೆಯಿಂದಲೇ ತಿಂಡಿಗಾಡಿ, ಊಟ, ಪಾನಿ ಪೂರಿ ಗಾಡಿಗಳು, ಮತ್ತು ಹಣ್ಣಿನ ಅಂಗಡಿಗಳು ಫುಟ್‌ಪಾತ್ ಮೇಲೆಯೇ ವ್ಯಾಪಾರ ಮಾಡುತ್ತಿರುವುದರಿಂದ ಓಡಾಡಲು ತೀವ್ರ ತೊಂದರೆಯಾಗಿದೆ.
ವಿನೋಬನಗರದ ಶಿವಾಲಯ ಪಕ್ಕದಲ್ಲಿ ಮಹಾನಗರ ಪಾಲಿಕೆ ನಿರ್ಮಿಸಿರುವ ಮಿನಿ ತರಕಾರಿ ಮಾರುಕಟ್ಟೆ ಇದೆ. ಅಲ್ಲಿ ಸುಮಾರು ೫೦ಕ್ಕೂ ಹೆಚ್ಚು ಮಳಿಗೆಗಳಿವೆ. ಆದರೆ ಆ ಮಳಿಗೆಗಳಲ್ಲಿ ಯಾರೂ ವ್ಯಾಪಾರ ಮಾಡದೆ ಫುಟ್‌ಪಾತ್‌ಗೆ ಬಂದಿದ್ದಾರೆ. ಈ ಬಗ್ಗೆ ಕೂಡ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.


ಒಟ್ಟಾರೆ ಇಡೀ ನಗರದಲ್ಲಿ ಪಾದಚಾರಿಗಳ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ. ಬೀದಿಬದಿ ವ್ಯಾಪಾರಿಗಳಿಗೆ ಇದು ಆಶ್ರಯ ಕೇಂದ್ರವಾದರೂ ಕೂಡ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿರುವುದರಿಂದ ಆ ಎಲ್ಲಾ ವ್ಯಾಪಾರಸ್ಥರಿಗೆ ಆಯಾ ಬಡಾವಣೆಗಳಲ್ಲಿ ಖಾಲಿ ಇರುವ ಜಾಗಗಳಲ್ಲಿ ವ್ಯಾಪಾರಕ್ಕೆ ಅವಕಾಶ ಕೊಟ್ಟು ಫುಟ್‌ಪಾತ್‌ಗಳನ್ನು ಮುಕ್ತಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Exit mobile version