ಶಿವಮೊಗ್ಗ : ಅಂಬೇಡ್ಕರ್ ನಮ್ಮ ರಾಷ್ಟ್ರದಲ್ಲಿ ಹುಟ್ಟಿ ಬರಲು ಸಾಧ್ಯವಿಲ್ಲ. ಆದರೆ ಅವರು ನೀಡಿರುವ ರಾಜ್ಯಾಂಗವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ದಲಿತ ಸಂಘರ್ಷ ಸಮಿತಿ, ದಲಿತ ನೌಕರರ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಕುವೆಂಪು ರಂಗಮಂದಿರದಲ್ಲಿ ಆಯೋಜಿದ್ದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಪ್ರೊ. ಬಿ. ಕೃಷ್ಣಪ್ಪ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯಾಂಗದ ಅಡಿಯಲ್ಲಿ ಎಲ್ಲರೂ ಬದುಕುವಂತಹ ಅವಕಾಶವನ್ನು ಅಂಬೇಡ್ಕರ್ ನೀಡಿದ್ದಾರೆ ಎಂದರು.
ಮಹಿಳಾ ಮೀಸಲಾತಿ ಸೇರಿದಂತೆ ಅನೇಕ ಜನಪರ ಕಾನೂನು ಮಾಡಲಾಗಿದೆ. ಆದರೆ ಬಹುತೇಕ ಕಾನೂನುಗಳು ಸರಿಯಾಗಿ ಜಾರಿಯಾಗಿಲ್ಲ. ಅವುಗಳನ್ನು ಸಮರ್ಪಕವಾಗಿ ಜಾರಿ ಮಾಡಿ ಸಾಮಾಜಿಕ ನ್ಯಾಯ ಕಲ್ಪಿಸಬೇಕಿದೆ. ಈಗಾಗಲೇ ಒಂದಿಷ್ಟು ಬದಲಾವಣೆಯಾಗಿದೆ. ಆದರೂ ಇನ್ನಷ್ಟು ಬದಲಾವಣೆ ಮೂಲಕ ಸಮ ಸಮಾಜ ನಿರ್ಮಾಣವಾಗಬೇಕಿದೆ ಎಂದರು.
1951 ರಿಂದ 1972 ರವರೆಗೆ ಯಾರೂ ಕೂಡ ಗೇಣಿ ಭೂಮಿ ಬಗ್ಗೆ ವಿಧಾನ ಸಭೆಯಲ್ಲಿ ಮಾತನಾಡಿರಲಿಲ್ಲ. ಹೋರಾಟ ಮಾತ್ರ ನಡೆಯುತ್ತಿತ್ತು. ನಾನು ವಿಧಾನ ಸಭೆಗೆ ಆಯ್ಕೆಯಾದ ಮೊದಲ ಬಾರಿಗೆ 1972 ರಲ್ಲಿ ವಿಧಾನ ಸಭೆಯಲ್ಲಿ ಮಾತನಾಡಿದ್ದೆ. ಬಳಿಕ ಸಿಎಂ ದೇವರಾಜ ಅರಸು ಅವರು ಕಾನೂನು ತಿದ್ದುಪಡಿ ಮಾಡಿ ಉಳುವವರಿಗೆ ಭೂಮಿ ನೀಡಿದ್ದರು ಎಂದು ಸ್ಮರಿಸಿದರು.
ಗೃಹಮಂಡಳಿ ಅಧ್ಯಕ್ಷನಾಗಿದ್ದಾಗ ಲೇಔಟ್ ನಿರ್ಮಾಣ ಮಾಡಿ ಎಲ್ಲಾ ಜಾತಿಯವರಿಗೂ ನಿವೇಶನ ನೀಡಿದ್ದೆ. ಆಗ ನನ್ನ ವಿರುದ್ದವೇ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ಎಲ್ಲರಿಗೂ ಒಂದೇ ಬಡಾವಣೆಯಲ್ಲಿ ನಿವೇಶನ ನೀಡಿದರೆ ಅನಾನುಕೂಲವಾಗಲಿದೆ ಎಂದು ದೂರಲಾಗಿತ್ತು ಎಂದರು.
ಜಿಲ್ಲೆಯಲ್ಲಿ ಅರಣ್ಯ ಭೂಮಿ ಸಾಗುವಳಿ ಮಾಡಿ ಬದುಕುತ್ತಿರುವವರ ಸಂಖ್ಯೆ ಜಾಸ್ತಿ ಇದೆ.ಆದರೆ ಅರಣ್ಯ ಭೂಮಿಸಾಗುವಳಿ ಬಗ್ಗೆ ಸಂಸತ್ತಿನಲ್ಲಿ ದನಿ ಎತ್ತುತ್ತಿಲ್ಲ. ಸಂಸದ ರಾಘವೇಂದ್ರ ಸಂಸತ್ತಿನಲ್ಲಿ ಮಾತನಾಡಬೇಕಿತ್ತು. ಭೂಮಿ ಹಕ್ಕು ಸಿಕ್ಕದೆ ಹೋರಾಟ ನಡೆಸುವ ಸ್ಥಿತಿ ಎದುರಾಗಿದೆ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ನೀಡಲು ಕಳಿಸಿದ ಪ್ರಸ್ತಾವನೆ ಕೂಡ ವಾಪಸ್ ಬಂದಿದೆ ಎಂದರು.
ಪ್ರೊಘಿ. ಬಿ.ಎಲ್. ರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಸಾಂಸ್ಕೃತಿಕ ಅಕ್ರಮಣ ಇಂದು ನಡೆಯುತ್ತಿದೆ. ಸಾಂಸ್ಕೃತಿಕ ಮೌಲ್ಯಗಳನ್ನು ತಿರುಚಲಾಗುತ್ತಿದೆ. ಇದರ ವಿರುದ್ಧ ಎಚ್ಚರಿಕೆಯನ್ನು ಜನರಿಗೆ ನೀಡಬೇಕಿದೆ. ಅಂತಹ ಕಾರ್ಯಕ್ರಮ ಇದಾಗಿದೆ ಎಂದರು.
ಅಂಬೇಡ್ಕರ್ ದಲಿತರಿಗೆ ಹೊಸ ದಿಕ್ಕು ನೀಡಿದವರು. ಅದನ್ನು ಮನೆಮನೆಗೆ ತಲುಪಿಸಿದವರು ಪ್ರೊ. ಬಿ.ಕೃಷ್ಣಪ್ಪನವರು. ಸಮಾಜವಾದಿ, ಉಳುವವನೇ ಭೂಮಿ ಒಡೆಯ ಚಳವಳಿಯ ನಡೆಸಿದವರು ಕಾಗೋಡು ತಿಮ್ಮಪ್ಪನವರು. ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಬ್ಯಾಕ್ ಲಾಗ್ ನಿಯಮಾವಳಿ ಮಾಡಿ ಅನೇಕ ಹುದ್ದೆಗಳನ್ನು ಭರ್ತಿ ಮಾಡಿದ್ದರು ಎಂದು ಸ್ಮರಿಸಿದರು.