Site icon TUNGATARANGA

ರಾಜ್ಯ ಸರ್ಕಾರದ ವಿದ್ಯುತ್ ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ | ಮೆಸ್ಕಾಂ ಕಛೇರಿಗೆ ಕಲ್ಲುತೂರಟ | ಶಾಸಕ ಚನ್ನಬಸಪ್ಪ ಸೇರಿದಂತೆ ಹಲವರನ್ನು ವಶಕ್ಕೆ ಪಡೆದ ಪೋಲಿಸರು

ವಮೊಗ್ಗ: ರಾಜ್ಯ ಸರ್ಕಾರ ವಿದ್ಯುತ್ ದರ ಏರಿಸಿರುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆ ಇಂದು ಆಕ್ರೋಶಕ್ಕೆ ತಿರುಗಿ ವಿದ್ಯುತ್ ಕಚೇರಿಗೆ ಮುತ್ತಿಗೆ ಹಾಕಿ ಕಲ್ಲು ತೂರಾಟ ನಡೆಸಿದರು.


ಪ್ರತಿಭಟನಕಾರರನ್ನು ತಡೆಯಲು ಪೊಲೀಸರು ಹರಸಾಹಸ ಮಾಡಿದರೂ ಕೂಡ ಕಚೇರಿಯ ಆವರಣಕ್ಕೆ ನುಗ್ಗಿದ ಪ್ರತಿಭಟನಕಾರರು ಕಚೇರಿಯ ಒಳಗೂ ಪ್ರವೇಶಿಸಿ ಸೂಚನಾ ಫಲಕದ ಗಾಜನ್ನು ಒಡೆದುಹಾಕಿದರು. ಅಲ್ಲದೆ ಬಿಜೆಪಿಯ ಕಾರ್ಯಕರ್ತನೊಬ್ಬ ಕಲ್ಲು ತೂರಾಟ ನಡೆಸಿ ಕಚೇರಿ ಮುಂಭಾಗದ ಕಿಟಕಿಯ ಗಾಜನ್ನು ಒಡೆದು ಹಾಕಿದನು. ತಕ್ಷಣವೇ ಪೊಲೀಸರು ಆತನನ್ನು ಬಂಧಿಸಿದರು.


ಆತನ ಬಂಧನದ ನಂತರ ಬಿಜೆಪಿ ಕಾರ್ಯಕರ್ತರು ಮತ್ತೆ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಲ್ಲದೆ ಬಂಧಿಸಿದ ವ್ಯಕ್ತಿಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕೆಇಬಿ ವೃತ್ತದಲ್ಲಿ ಧರಣಿ ಕುಳಿತರು. ಶಾಸಕ ಚನ್ನಬಸಪ್ಪ ಸೇರಿದಂತೆ ಹಲವರನ್ನು ಪೊಲೀಸರು ಈ ಸಂದರ್ಭದಲ್ಲಿ ವಶಕ್ಕೆ ಪಡೆದರು.


ಇದಕ್ಕೂ ಮೊದಲು ಕೆಇಬಿ ವೃತ್ತದಲ್ಲಿರುವ ಮೆಸ್ಕಾಂ ಕಚೇರಿ ಮುಂದೆ ಪ್ರತಿಭಟನಾ ಸಭೆ ನಡೆಸಿದ ಬಿಜೆಪಿ ಮುಖಂಡರು ಕಾಂಗ್ರೆಸ್ ಸರ್ಕಾರವನ್ನು ಹಿಗ್ಗಾಮುಗ್ಗ ಟೀಕಿಸಿದರು. ಕೂಡಲೇ ದರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರು.

ದರ ಹೆಚ್ಚಾಗಿಲ್ಲ: ವಿರೇಂದ್ರ
ವಿದ್ಯುತ್ ದರ ಏರಿಕೆ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಇಲಾಖೆಯ ಕಾರ್ಯಪಾಲಕ ಅಭಿಯಂತರ ವೀರೇಂದ್ರ, ಬೆಲೆ ಏರಿಕೆ ಬಗ್ಗೆ ಬಿಜೆಪಿ ಕಾರ್ಯಕರ್ತರು ಮನವಿ ಕೊಡಬಹುದಿತ್ತು. ಆದರೆ ಪ್ರತಿಭಟನೆ ಮಾಡಿದರು. ಈ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟದಲ್ಲಿ ಎರಡು ಗಾಜುಗಳು ಒಡೆದಿವೆ. ಸಿಬ್ಬಂದಿಗಳಿಗೆ ಯಾವುದೇ ತೊಂದರೆ ಆಗಿಲ್ಲ.
ಮೇ೧೨ರಿಂದಲೇ ಪರಿಷ್ಕೃತ ದರ ಜಾರಿಯಾಗಿರುವುದರಿಂದ ಸಹಜವಾಗಿ ಈ ತಿಂಗಳ ಬಿಲ್ಲಿನಲ್ಲಿ ಏರಿಕೆಯಾಗಿದೆ. ಮತ್ತು ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಆದರೆ ನಾಲ್ಕು ಪಟ್ಟು ಮೂರು ಪಟ್ಟು ಹೆಚ್ಚಾಗಿಲ್ಲ. ಹಾಗೇನಾದರೂ ಹೆಚ್ಚಾಗಿದ್ದರೆ ಬಿಲ್ ಸಮೇತ ಬಂದರೆ ಅದನ್ನು ಪರಿಶೀಲಿಸುತೆವೆ ಎಂದರು.


ಶಾಸಕ ಚನ್ನಬಸಪ್ಪ ಮಾತನಾಡಿ, ಬಡವರ ವಿರೋಧಿ ಸರ್ಕಾರವಿದು. ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ೪೨೦ ಸರ್ಕಾರವಾಗಿದೆ. ಈ ಸರ್ಕಾರಕ್ಕೆ ಕಪಾಳಕ್ಕೆ ಹೊಡೆಯಬೇಕು. ಜನರನ್ನು ದಿಕ್ಕು ತಪ್ಪಿಸುತ್ತಿದೆ. ವಿದ್ಯುತ್ ದರ ಹೆಚ್ಚಾದರೆ ಕೈಗಾರಿಕೆಗಳ ಗತಿ ಏನು ಬಿಜೆಪಿ ಸರ್ಕಾರದ ಮೇಲೆ ತಪ್ಪು ಹೊರಿಸುತ್ತಾರೆ. ವಿದ್ಯುತ್‌ಕಂಪೆನಿಗಳು ದರ ಏರಿಸುವಂತೆ ಸರ್ಕಾರದ ಮುಂದಿಟ್ಟಾಗ ಬಿಜೆಪಿ ಸರ್ಕಾರ ಅದನ್ನು ನಿರಾಕರಿಸಿತ್ತು. ಅಧಿಕಾರಕ್ಕೆ ಬರಲು ಗ್ಯಾರಂಟಿಗಳ ಸುಳ್ಳು ಹೇಳಿ ಅದನ್ನು ಜಾರಿಗೆ ತರಲಾಗದೆ ಈಗ ವಿದ್ಯುತ್ ದರ ಏರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಕುತಂತ್ರದ ರಾಜಕಾರಣ ಮಾಡುತ್ತಿದೆ ಎಂದರು.


ಶಾಸಕ ರುದ್ರೇಗೌಡರು ಮಾತನಾಡಿ, ಹೊಸ ಸರ್ಕಾರ ಬಂದು ಒಂದು ತಿಂಗಳಲ್ಲಿಯೇ ಬೀದಿಗಿಳಿಯುವ ಪರಿಸ್ಥಿತಿ ಬಂದಿರುವುದು ದುರದೃಷ್ಟಕರವಾಗಿದೆ ಎಂದರು.
ಎಸ್. ದತ್ತಾತ್ರಿ ಮಾತನಾಡಿ, ಇದೊಂದು ಭ್ರಷ್ಟ ಸರ್ಕಾರವಾಗಿದೆ. ಗ್ಯಾರಂಟಿ ಹೆಸರಿನಲ್ಲಿ ಜನತೆಗೆ ಮಂಕುಬೂದಿ ಎರಚುತ್ತಿದೆ ಎಂದು ಟೀಕಿಸಿದರು.


ಶಾಸಕ ಡಿ.ಎಸ್. ಅರುಣ್ ಮಾತನಾಡಿ, ಕೂಡಲೇ ಏರಿಸಿದ ವಿದ್ಯುತ್ ದರವನ್ನು ಇಳಿಸಬೇಕು.ವಿದ್ಯುತ್ ಕಂಪೆನಿಗಳಿಗೆ ಸರ್ಕಾರ ಮಣೆ ಹಾಕಬಾರದು. ಅಲ್ಲದೆ ಬಿಜೆಪಿ ಸರ್ಕಾರದಲ್ಲಿ ಜಾರಿಗೆ ತಂದ ಕಾಯಿದೆಗಳನ್ನು ವಾಪಾಸ್ ತೆಗೆದುಕೊಳ್ಳುವುದು ಕೂಡ ಸರಿಯಲ್ಲ ಎಂದರು.
ಪ್ರತಿಭಟನೆಯಲ್ಲಿ ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಶಂಕರ ನಾಯಕ್, ಪಾಲಿಕೆ ಸದಸ್ಯರಾದ ಇ. ವಿಶ್ವಾಸ್, ಅನಿತಾ ರವಿಶಂಕರ್, ಸುರೇಖಾ ಮುರಳೀಧರ್, ಮಂಜುನಾಥ್, ಸುನೀತಾ ಅಣ್ಣಪ್ಪ,
ವಿಶ್ವನಾಥ್, ಬಿಜೆಪಿ ನಗರಾಧ್ಯಕ್ಷ ಜಗದೀಶ್, ಪ್ರಮುಖರಾದ ಬಳ್ಳೇಕೆರೆ ಸಂತೋಷ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Exit mobile version