Site icon TUNGATARANGA

“ರಕ್ತದಾನಿಗಳೇ ನಿಜವಾದ ಹೀರೋಗಳು” : ವಿಶ್ವ ರಕ್ತ ದಾನಿಗಳ ದಿನಾಚರಣೆಯಲ್ಲಿ ಡಿಹೆಚ್‍ಓ



ಶಿವಮೊಗ್ಗ, ಜೂನ್ 14:
ರಕ್ತ ಒಂದು ಜೀವ ಉಳಿಸುವ ಅಂಶವಾಗಿದ್ದು, ರಕ್ತದಾನ ಮಾಡಿ ಹಲವರ ಜೀವ ಉಳಿಸುತ್ತಿರುವ ರಕ್ತದಾನಿಗಳು ನಿಜವಾದ ಹೀರೋಗಳು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಹೇಳಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸುಬ್ಬಯ್ಯ ನರ್ಸಿಂಗ್ ಕಾಲೇಜ್, ರೋಟರಿ ಸಂಸ್ಥೆ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇಂದು ಐಎಂಎ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆಯ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ. ಕೃತಕವಾಗಿ ಸೃಷ್ಟಿಸಲು ಬರುವುದಿಲ್ಲ. ಮನುಷ್ಯ ಮಾತ್ರ ಇನ್ನೊಬ್ಬ ಮನುಷ್ಯನಿಗೆ ರಕ್ತ ನೀಡಬಹುದು. ಈ ನಿಟ್ಟಿನಲ್ಲಿ ನಾವು ಮಾಡುವ ಕೆಲಸ ಇತರರಿಗೆ ಪ್ರೇರಣೆಯಾಗಬೇಕು. ಅರ್ಹರೆಲ್ಲರೂ ಸ್ವಯಂಪ್ರೇರಿತ ರಕ್ತದಾನಕ್ಕೆ ಮುಂದಾಗಬೇಕು.
ರಕ್ತದ ಕೊರತೆಯಿಂದ ಗರ್ಭಿಣಿ ಸೇರಿದಂತೆ ಯಾರ ಸಾವು ಸಂಭವಿಸಬಾರದು ಎಂಬ ಉದ್ದೇಶದಿಂದ ಜಿಲ್ಲಾ ಮತ್ತು ಎಲ್ಲ ತಾಲ್ಲೂಕುಗಳಲ್ಲಿ ರಕ್ತನಿಧಿ ಕೇಂದ್ರಗಳಿವೆ. ನಮ್ಮ ಜನಸಂಖ್ಯೆಯ ಶೇ.1 ಭಾಗಕ್ಕೆ ರಕ್ತದ ಅವಶ್ಯಕತೆ ಇದೆ. ನಮ್ಮ ಜಿಲ್ಲೆಯಲ್ಲಿಯೇ ಒಂದು ತಿಂಗಳಿಗೆ ಸುಮಾರು 18 ಸಾವಿರ ಯುನಿಟ್ ರಕ್ತದ ಅವಶ್ಯಕತೆ ಇದೆ. ಆದ್ದರಿಂದ ರಕ್ತನಿಧಿ ಕೇಂದ್ರಗಳ ಲಭ್ಯತೆ ಮತ್ತು ರಕ್ತದಾನಿಗಳ ಸಂಖ್ಯೆ ಹೆಚ್ಚಬೇಕು. ರಕ್ತದಾನಕ್ಕಾಗಿ ರೋಗಿಗಳ ಕಡೆಯವರನ್ನು ಅಲೆಸುವುದರ ಬದಲಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ರಕ್ತವನ್ನು ತ್ವರಿತವಾಗಿ ನೀಡಲು ಸೂಚನೆ ನೀಡಲಾಗುತ್ತಿದೆ ಎಂದರು.


ಜಿಲ್ಲಾ ಕೀಟಜನ್ಯ ರೋಗ ನಿಯಂತ್ರಣಾಧಿಕಾರಿ ಡಾ.ಗುಡುದಪ್ಪ ಕಸಬಿ ಮಾತನಾಡಿ, ಪ್ರಥಮ ಬಾರಿಗೆ ರಕ್ತದ ಗುಂಪುಗಳನ್ನು ಕಂಡು ಹಿಡಿದ ವಿಜ್ಞಾನಿ ಕಾರ್ಲ್ ಲ್ಯಾಂಡ್‍ಸ್ಟೈನರ್ ಜನ್ಮದಿನದ ನೆನಪಿಗಾಗಿ 2004 ರಿಂದ ವಿಶ್ವ ಆರೋಗ್ಯ ಸಂಸ್ಥೆ ಜೂನ್ 14 ರಂದು ವಿಶ್ವ ರಕ್ತ ದಾನಿಗಳ ದಿನವನ್ನು ಆಚರಣೆಗೆ ತಂದಿದೆ.
ಸಾರ್ವಜನಿರು, ಯುವಜನತೆಯನ್ನು ರಕ್ತದಾನಕ್ಕೆ ಪ್ರೇರೇಪಿಸುವುದು ಈ ದಿನದ ಉದ್ದೇಶ. ಶೇ.60 ಜನರು ರಕ್ತದಾನಕ್ಕೆ ಅರ್ಹರು. ಆದರೆ ಕೇವಲ 0.5 ಮಾತ್ರ ರಕ್ತದಾನ ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಶೇ.1.5 ರಕ್ತದಾನವಾಗುತ್ತಿದೆ. ಶೇ.3 ರಕ್ತದಾನವಾದರೆ ರಕ್ತದ ಕೊರತೆ ನೀಗಿಸಬಹುದು. ತಪ್ಪು ಕಲ್ಪನೆ, ಭಯ ಮತ್ತು ಅರಿವಿನ ಕೊರತೆಯಿಂದ ರಕ್ತದಾನ ಪ್ರಮಾಣ ಕಡಿಮೆ ಇದೆ. ಆದ್ದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ಯುವಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು.


ರಕ್ತದಾನ ಪುಣ್ಯದ ಕೆಲಸ. ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದವರು ಸಮಾಜಕ್ಕೆ ಮಾದರಿ. ಪುರುಷರು ಪ್ರತಿ 4 ತಿಂಗಳು ಮತ್ತು ಮಹಿಳೆಯರು ಪ್ರತಿ 3 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಎಲ್ಲ ಕಾಲೇಜು ಮತ್ತು ಹಳ್ಳಿಗಳಲ್ಲಿ ರಕ್ತದಾನ ಶಿಬಿರಗಳು ಆಗಬೇಕು ಎಂದರು.
ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಸಿದ್ದನಗೌಡ ಪಾಟೀಲ್ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ದಿನಕ್ಕೆ 65 ರಿಂದ 70 ಯುನಿಟ್ ರಕ್ತದ ಬೇಡಿಕೆ ಇದೆ. ರಕ್ತ ಅಮೂಲ್ಯವಾಗಿದ್ದು ಅದನ್ನು ಸರಿಯಾಗಿ ಉಪಯೋಗಿಸಬೇಕು. ರಕ್ತ ವ್ಯಾಪಾರವಾಗಬಾರದು. ಅದರ ಮಹತ್ವವನ್ನು ಎಲ್ಲರೂ ಅರಿತುಕೊಳ್ಳಬೇಕೆಂದರು.


ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಅರುಣ್.ಎಂ.ಎಸ್ ಮಾತನಾಡಿ, 18 ವರ್ಷ ತುಂಬಿದ ಎಲ್ಲ ಯುವಜನತೆ ರಕ್ತ ದಾನ ಮಾಡಬಹುದು. ವಿದ್ಯಾರ್ಥಿಗಳು ರಕ್ತದಾನದ ಮಹತ್ವ ತಿಳಿದು ಕನಿಷ್ಟ ವರ್ಷಕ್ಕೊಮ್ಮೆ ರಕ್ತದಾನ ಮಾಡಬೇಕು ಎಂದರು.
ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಡಾ.ದಿನೇಶ್.ಜಿ.ಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ 8 ರಕ್ತನಿಧಿ ಕೇಂದ್ರಗಳ ಸಹಕಾರದೊಂದಿಗೆ ರಕ್ತ ಸಂಗ್ರಹಣೆ ಮತ್ತು ವಿತರಣೆಯಾಗುತ್ತಿದೆ. ಅಪರೂಪದ ಬಾಂಬೆ ರಕ್ತವನ್ನು ಸಹ ಸಂಗ್ರಹ ಮಾಡುತ್ತಾ ಬಂದಿದ್ದೇವೆ. 2022-23 ನೇ ಸಾಲಿನಲ್ಲಿ 35070 ಯುನಿಟ್ ರಕ್ತವನ್ನು ನೀಡಲಾಗಿದೆ. ರಕ್ತನಿಧಿಗಳು, ಸಂಘ ಸಂಸ್ಥೆಗಳ ಸಹಕಾರದಲ್ಲಿ ಜಿಲ್ಲೆ ಉತ್ತಮ ಸೇವೆ ನೀಡುತ್ತಿದ್ದು ಅನೇಕ ಪ್ರಶಸ್ತಿಗಳ ಸಹ ಪಡೆಯುತ್ತಾ ಬಂದಿದೆ ಎಂದರು.


ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಸಾರ್ವಜನಿರು, ವೈದ್ಯರು, ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಕೇಂದ್ರದ ಅಧಿಕಾರಿ ಉಲ್ಲಾಸ್, ಡಾ.ರವಿಕುಮಾರ್, ಡಾ.ಮಂಜುನಾಥ ನಾಗ್ಲೀಕರ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ರೋಟರಿ ಸಂಸ್ಥೆಯ ವಿಜಯಕುಮಾರ್ ಇತರರು ಪಾಲ್ಗೊಂಡಿದ್ದರು.
ಜಾಥಾ ಕಾರ್ಯಕ್ರಮಕ್ಕೆ ಚಾಲನೆ : ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಜೂನ್ 12 ರಂದು ಜಿಲ್ಲಧಿಕಾರಿ ಕಚೇರಿ ಆವರಣದಿಂದ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಚಾಲನೆ ನೀಡಿದರು. ರಕ್ತ ನೀಡಿ, ಪ್ಲಾಸ್ಮ ನೀಡಿ, ಜೀವನ ಹಂಚಿಕೊಳ್ಳಿ, ನಿರಂತರವಾಗಿ ಹಂಚಿಕೊಳ್ಳಿ ಎಂಬ ಘೋಷಣೆಯೊಂದಿಗೆ ಜಾಥಾದಲ್ಲಿ ಜಾಗೃತಿ ಮೂಡಿಸಲಾಯಿತು.


Exit mobile version