ಸಾಗರ : ವಿದ್ಯುತ್ ದರ ಏಕಾಏಕಿ ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ವತಿಯಿಂದ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಗ್ಯಾರೆಂಟಿ ಕಾರ್ಡ್ ನೀಡುವ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಬಡವರ ಬದುಕಿನ ಮೇಲೆ ಬರೆ ಎಳೆಯುವ ಪ್ರಯತ್ನ ನಡೆಸುತ್ತಿದೆ. ಗೃಹಜ್ಯೋತಿ ಯೋಜನೆ ಮೂಲಕ ೨೦೦ ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಭರವಸೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರಿಗೆ ಕರೆಂಟ್ ಬಿಲ್ ಶಾಕ್ ನೀಡಿದ್ದನ್ನು ಬಿಜೆಪಿ ತೀವೃವಾಗಿ ಖಂಡಿಸುತ್ತದೆ. ಕರೆಂಟ್ ಬಿಲ್ ಒಂದಕ್ಕೆ ಎರಡು ಪಟ್ಟು ಹೆಚ್ಚು ಬರುತ್ತಿದ್ದು, ಜನಸಾಮಾನ್ಯರು ವಿದ್ಯುತ್ ಬಿಲ್ ಕಟ್ಟಲಾಗದೆ ಪರಿತಪಿಸುವ ಸ್ಥಿತಿಯನ್ನು ಕಾಂಗ್ರೇಸ್ ಸರ್ಕಾರ ಮಾಡಿದೆ ಎಂದು ಆರೋಪಿಸಿದರು.
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಅವಕಾಶ ಕೊಟ್ಟಿದ್ದನ್ನು ಬಿಜೆಪಿ ಸ್ವಾಗತಿಸುತ್ತದೆ. ಆದರೆ ಮಲೆನಾಡು ಪ್ರದೇಶದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯ ತೀರ ಕಡಿಮೆ ಇದೆ. ಸರ್ಕಾರ ಎಲ್ಲ ಮಾರ್ಗಗಳಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯ ಒದಗಿಸಬೇಕು. ಇಲ್ಲವೆ ಖಾಸಗಿ ಬಸ್‌ನಲ್ಲಿ ಮಹಿಳೆಯರು ಉಚಿತವಾಗಿ ಸಂಚಾರ ಮಾಡಲು ಅವಕಾಶ ಕಲ್ಪಿಸಬೇಕು. ಖಾಸಗಿ ಬಸ್‌ನಲ್ಲಿ ಮಹಿಳೆಯರು ಪ್ರಯಾಣಿಸುವ ವೆಚ್ಚವನ್ನು ಸರ್ಕಾರ ಭರಿಸಬೇಕು. ಆರಂಭದಲ್ಲಿ ಎಲ್ಲವೂ ಉಚಿತ ಎಂದು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಪಕ್ಷ ಒಂದೊಂದೆ ಕಂಡಿಷನ್ ಹಾಕುವ ಮೂಲಕ ಕೊಟ್ಟ ಮಾಉ ತಪ್ಪುತ್ತಿದೆ. ವಚನಭ್ರಷ್ಟ ಸರ್ಕಾರದ ವಿರುದ್ದ ಬಿಜೆಪಿ ನಿರಂತರ ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಮಹಿಳಾ ಪ್ರಮುಖರಾದ ಡಾ. ರಾಜನಂದಿನಿ ಕಾಗೋಡು ಮಾತನಾಡಿ, ಶಕ್ತಿ ಯೋಜನೆ ಜಾರಿಗೆ ಮಾಡಿರುವುದು ಸಂತೋಷ. ಆದರೆ ಮಹಿಳೆಯರು ಪ್ರಯಾಣಿಸುತ್ತಾರೆ ಎಂದು ನಂಬಿಕೊಂಡಿದ್ದ ಖಾಸಗಿ ಬಸ್, ಆಟೋ ಮಾಲೀಕರು, ಚಾಲಕರ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಅವರಿಗೆ ಸರ್ಕಾರ ಪರ್ಯಾಯ ಆದಾಯ ವ್ಯವಸ್ಥೆ ಕಲ್ಪಿಸಬೇಕು. ೨೦೦ ಯೂನಿಟ್ ಉಚಿತ ವಿದ್ಯುತ್ ಭರವಸೆ ನೀಡಿ ಏಕಾಏಕಿ ದರ ಹೆಚ್ಚಳ ಮಾಡಿರುವ ಕ್ರಮ ಅವೈಜ್ಞಾನಿಕವಾಗಿದೆ. ಅಧಿಕಾರಿಗಳು ಇದರ ಬಗ್ಗೆ ಸ್ಪಷ್ಟ ಮಾಹಿತಿ ಜನರಿಗೆ ಕೊಡದೆ ಸತಾಯಿಸುತ್ತಿದ್ದಾರೆ ಎಂದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, ಸರ್ಕಾರ ಐದು ಭರವಸೆಗಳನ್ನು ನೀಡಿ ೧೩೫ ಸ್ಥಾನ ಗಳಿಸಿದೆ. ಆದರೆ ಭರವಸೆ ಈಡೇರಿಸುವ ಹೆಸರಿನಲ್ಲಿ ಬಡ ಮತ್ತು ಮಧ್ಯಮವರ್ಗದ ಶೋಷಣೆ ಸಹಿಸಲು ಸಾಧ್ಯವಿಲ್ಲ. ಅಧಿಕಾರಿಗಳು ಸರ್ಕಾರದ, ಶಾಸಕರ ಕೈಗೊಂಬೆಯಂತೆ ವರ್ತಿಸಿ ಬಡವರ ಬದುಕಿನ ಜೊತೆ ಚೆಲ್ಲಾಟವಾಡಬಾರದು. ತಕ್ಷಣ ವಿದ್ಯುತ್ ದರ ಕಡಿಮೆಗೊಳಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮುಖಂಡ ಕೆ.ಎಸ್.ಪ್ರಶಾಂತ್, ನಗರಸಭೆ ಮಾಜಿ ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿದರು. ಈ ಸಂದರ್ಭದಲ್ಲಿ ಲೋಕನಾಥ್ ಬಿಳಿಸಿರಿ, ಗಣೇಶಪ್ರಸಾದ್, ರೇವಪ್ಪ, ಭರ್ಮಪ್ಪ, ವಾಸಂತಿ ರಮೇಶ್, ಸವಿತಾ ವಾಸು, ಪ್ರೇಮ ಸಿಂಗ್, ಭಾವನಾ ಸಂತೋಷ್, ಸತೀಶ್ ಕೆ., ಪದ್ಮಿನಿ ರಾವ್, ಕುಪೇಂದ್ರ ರೆಡ್ಡಿ, ಆರ್.ಶ್ರೀನಿವಾಸ್, ಪುರುಷೋತ್ತಮ, ಸಂತೋಷ್ ಶೇಟ್, ದೇವೇಂದ್ರಪ್ಪ ಇನ್ನಿತರರು ಹಾಜರಿದ್ದರು