Site icon TUNGATARANGA

ಮಹಿಳೆಯ ಸಬಲೀಕರಣಕ್ಕಾಗಿ ಕಾಂಗ್ರೆಸ್‌ ಸರ್ಕಾರದಿಂದ ನಾರಿಶಕ್ತಿ ಯೋಜನೆ ಜಾರಿ : ಶಾಸಕ ಗೋಪಾಲಕೃಷ್ಣ ಬೇಳೂರು


ಸಾಗರಮಹಿಳಾ ಸಬಲೀಕರಣದ ಉದ್ದೇಶದಿಂದ ನಾರಿ ಶಕ್ತಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತರುವ ಮೂಲಕ ಪಕ್ಷ ನೀಡಿದ ಗ್ಯಾರಂಟಿ ಭರವಸೆಯ ಈಡೇರಿಸಲು ಮುಂದಾಗಿದೆ ಎಂದು ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.


ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಭಾನುವಾರ ರಾಜ್ಯ ಸರ್ಕಾರದ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸರ್ಕಾರ ನುಡಿದಂತೆ ನಡೆಯುತ್ತದೆ.ಚುನಾವಣಾ ಪೂರ್ವದಲ್ಲಿ ನೀಡಿದ ಗ್ಯಾರಂಟಿಗಳ ಈಡೇರಿಸುವುದು ಗ್ಯಾರಂಟಿ ಎಂದು ಭರವಸೆಯಿಂದ ಹೇಳಿದರು.


ಕಳೆದ ೧೦ ವರ್ಷಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಗ್ಯಗಳ ಸರ್ಕಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.ಇಂದು ಅಂತಹ ಭಾಗ್ಯಗಳ ಪ್ರಮುಖ ಭಾಗ್ಯ ಅನ್ನಭಾಗ್ಯ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದಾರೆ.ಇದೊಂದು ಜನಪರವಾದ ಸರ್ಕಾರ ಎಂಬ ಹೆಗ್ಗಳಿಕೆಗೂ ಪಾತ್ರವಾಗುತ್ತಿದೆ ಎಂದರು.


ಕೆಲವರು ಸರ್ಕಾರದ ಮತ್ತು ಯೋಜನೆಗಳ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ.ಈ ಹಿಂದಿನ ಸರ್ಕಾರ ೫ ವರ್ಷದಲ್ಲಿನ ವಿಫಲತೆಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು.ನಮ್ಮ ಸರ್ಕಾರ ೫೦ ದಿನಗಳೊಳಗೆ ಯೋಜನೆಗಳ ಹಾಗೂ ಗ್ಯಾರಂಟಿಗಳ ಅನುಷ್ಠಾನಕ್ಕೆ ಮುಂದಾಗಿರುವುದು ರಾಜ್ಯದ ಜನತೆಯಲ್ಲಿ ಹೊಸ ಭರವಸೆಗಳನ್ನು ಸೃಷ್ಟಿಸಿದೆ ಎಂದರು.


ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಂಚಾರಕ್ಕೆ ಕೊರತೆಯಾಗದಂತೆ ಕ್ರಮವಹಿಸಲು ಸೂಚಿಸಲಾಗಿದೆ.ಕ್ಷೇತ್ರದಲ್ಲಿನ ಹಲವು ಗ್ರಾಮಗಳಿಗೆ ಬಸ್ಸುಗಳ ಕೊರತೆಯಿರುವುದು ಚುನಾವಣಾ ಪ್ರಚಾರದಲ್ಲಿರುವಾಗಲೇ ಗೊತ್ತಾಗಿದೆ.ಗ್ರಾಮೀಣ ಪ್ರದೇಶಗಲ ಜನ ಸಂಚಾರಕ್ಕೆ ಅಗತ್ಯ ಬಸ್ಸುಗಳ ಸಂಚಾರ ಆರಂಭಿಸಲು ಸೂಕ್ತ ಕ್ರಮವಹಿಸುವುದಾಗಿ ಭರವಸೆ ನೀಡಿದರು.


ಪೊಲೀಸ್ ಉಪ ಅಧೀಕ್ಷಕ ರೋಹನ್ ಜಗದೀಶ್, ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲ ಮಧುಕರ್, ಜಿಪಂ ಮಾಜಿ ಸದಸ್ಯೆ ಅನಿತಾ ಕುಮಾರಿ, ಹೆಚ್.ಕೆ.ನಾಗಪ್ಪ, ನಗರಸಭೆಯ ಸದಸ್ಯರಾದ ಗಣಪತಿ ಮಂಡಗಳಲೆ, ಮಧುಮಾಲತಿ, , ಸಬೀನಾ ಉಮೇಶ್, ನಾಗರತ್ನ, ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್.ಸುರೇಶಬಾಬು ,ಮುಖಂಡರುಗಳಾದ ಇಂದೂದರಗೌಡರು,ಇತರರು ಹಾಜರಿದ್ದರು. ಸರ್ಕಾರಿ ಬಸ್ ಡಿಪೊ ವ್ಯವಸ್ಥಾಪಕ ರಾಜಪ್ಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರವಿಂದ ಬಾಲಾಜಿ ನಿರೂಪಿಸಿದರು.

Exit mobile version