ಶಿವಮೊಗ್ಗ: ಪ್ರತಿಯೊಬ್ಬರ ಜೀವನದಲ್ಲಿ ತಂದೆ- ತಾಯಿಯಷ್ಟೇ ಗುರುವಿನ ಪಾತ್ರ ಪ್ರಧಾನವಾಗಿರುತ್ತದೆ. ಶಿಕ್ಷಕರು ತಮ್ಮ ಜ್ಞಾನವನ್ನು ಧಾರೆ ಎರೆದು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿಸುತ್ತಾರೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ ಹೇಳಿದರು.
ಇಲ್ಲಿನ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದಲ್ಲಿ ೧೨-೦೬-೨೦೨೨ರ ಇಂದು ಸೋಮವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಸದರಿ ವಿದ್ಯಾಲಯದ ೨೦೨೩-೨೪ನೇ ಸಾಲಿನ ವಿದ್ಯಾರ್ಥಿ ಪರಿಷತ್ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನಾ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಆಧುನಿಕ ಶಿಕ್ಷಣ ಯಾಂತ್ರೀಕೃತವಾಗುತ್ತಿದೆ. ಶಿಕ್ಷಕರು ಪಠ್ಯಕ್ಕಷ್ಟೇ ಸೀಮಿತರಾಗದೆ ಮಕ್ಕಳಿಗೆ ನೈತಿಕ ಮೌಲ್ಯ, ಮಾನವೀಯತೆ, ಉತ್ತಮ ನಡವಳಿಕೆಯನ್ನು ಕಲಿಸಬೇಕು. ಸದೃಢ ಸಮಾಜ ನಿರ್ಮಾಣಕ್ಕೆ ಒಳ್ಳೆಯ ವ್ಯಕ್ತಿಗಳ ಅವಶ್ಯಕತೆ ಇರುತ್ತದೆ. ಇಂತಹ ವ್ಯಕ್ತಿಗಳನ್ನು ಶಿಕ್ಷಕರು ರೂಪಿಸಬೇಕು. ಶಿಕ್ಷಕರು ಕೇವಲ ಸಂಬಳಕ್ಕಾಗಿ ಕೆಲಸ ಮಾಡಬಾರದು. ಇದೊಂದು ಸೇವಾ ಕ್ಷೇತ್ರ. ಸೇವಾಮನೋಭಾವದ ಶಿಕ್ಷಕರು ಉತ್ತಮ ನಾಗರೀಕರನ್ನು ರೂಪಿಸುತ್ತಾರೆ ಎಂದರು.
ಶಿಕ್ಷಣದ ಅಗತ್ಯಗಳಿಗೆ ತಕ್ಕಂತೆ ಸಾಕಷ್ಟು ಕಲಿಕಾ ತಂತ್ರಗಳನ್ನು ರೂಪಿಸುವ ಮೂಲಕ ಬೋಧನೆ-ಕಲಿಕೆಯ ಪ್ರಕ್ರಿಯೆಯಲ್ಲಿ ಶಿಕ್ಷಕರು ತೊಡಗಿದ್ದಾರೆ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳಿಗೆ ಹಲವು ರೀತಿಯಲ್ಲಿ ತಮ್ಮ ಕಲಿಕೆಯನ್ನು ತಡೆರಹಿತವಾಗಿ ಮುಂದುವರಿಸುವ ಅವಕಾಶವನ್ನು ಒದಗಿಸಲಾಗಿದೆ. ಶಿಕ್ಷಕರು ಕೇವಲ ಜ್ಞಾನದ ಭಂಡಾರವಾಗಿರದೆ
, ವಿದ್ಯಾರ್ಥಿಗಳ ಮಾರ್ಗದರ್ಶಕರೂ ಆಗಿಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಹೆಚ್.ಬಿ ಆದಿಮೂರ್ತಿ, ಪ್ರೊಬೇಷನರಿ ಜಿಲ್ಲಾಧಿಕಾರಿ ದಲ್ಜಿತ್ ಕುಮಾರ್, ಬೇಳೇಗದ್ದೆ ಪ್ರಭಾಕರ, ಎನ್.ಹೆಚ್. ನಾಗರಾಜ್ ನೀರುಳ್ಳಿ, ಸುಮಿತ್ರ ಕೇಶವಮೂರ್ತಿ, ಟಿ.ಪಿ. ನಾಗರಾಜ್, ಪ್ರಾಂಶುಪಾಲ ಡಾ. ಮಧು ಜಿ. ಉಪಸ್ಥಿತರಿದ್ದರು.
ನೌಶದ್ ಹೆಚ್. ಪ್ರಾರ್ಥಿಸಿ, ಪ್ರಕಾಶ್ ಎನ್.ಜೆ. ಸ್ವಾಗತಿಸಿ, ಕಾವ್ಯ ಸಿ. ನಿರೂಪಿಸಿ, ಸವಿತಾ ಎಂ.ಎಸ್. ವಂದಿಸಿದರು.