Site icon TUNGATARANGA

ಶರಾವತಿ ಹಿನ್ನೀರು ಜನರ ಬಹುಕಾಲದ ಬೇಡಿಕೆಯಾಗಿದ್ದ ತುಮರಿ ಸೇತುವೆ ಕಾಮಗಾರಿಯನ್ನು ಮುಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ: ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ

ಸಾಗರ : ಶರಾವತಿ ಹಿನ್ನೀರು ಜನರ ಬಹುಕಾಲದ ಬೇಡಿಕೆಯಾಗಿದ್ದ ತುಮರಿ ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.


ತಾಲ್ಲೂಕಿನ ಅಂಬಾರಗೋಡ್ಲುವಿನಲ್ಲಿ ಭಾನುವಾರ ತುಮರಿ ಸೇತುವೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಅವರು ಮಾತನಾಡುತ್ತಿದ್ದರು.


ನಾಡಿಗೆ ವಿದ್ಯುತ್ ನೀಡಲು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ, ಸಂತ್ರಸ್ತರಾಗಿ ಬದುಕುತ್ತಿರುವ ಕುಟುಂಬಗಳಿಗೆ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಸೇತುವೆ ನಿರ್ಮಾಣವಾಗಬೇಕು ಎನ್ನುವುದು ಹಿನ್ನೀರು ಜನರ ಬಹುಕಾಲದ ಬೇಡಿಕೆಯಾಗಿತ್ತು. ಅದು ಈಡೇರುವ ಹಂತಕ್ಕೆ ಬಂದಿದೆ ಎಂದು ಹೇಳಿದರು.


ಮಳೆ ಕೊರತೆಯಿಂದ ಅಂಬಾರಗೋಡ್ಲು ಕಳಸವಳ್ಳಿ ನಡುವೆ ಸಂಚರಿಸುತ್ತಿದ್ದ ಲಾಂಚ್‌ಗಳ ಸಂಚಾರಕ್ಕೆ ತೊಡಕುಂಟಾಗಿದೆ. ನೀರು ಕಡಿಮೆ ಇರುವುದರಿಂದ ಲಾಂಚ್ ಸಂಚಾರ ಕಷ್ಟಸಾಧ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಮುಂದಿನ ಒಂದು ವಾರಗಳ ಕಾಲ ಲಾಂಚ್ ಸಂಚಾರಕ್ಕೆ ಸಮಸ್ಯೆ ಇಲ್ಲ. ಮಳೆ ಬರದೆ ಇದ್ದರೆ ಲಾಂಚ್‌ನಲ್ಲಿ ಪ್ರಯಾಣಿಕರನ್ನು ಮಾತ್ರ ಸಾಗಿಸಲು ಸಾಧ್ಯವಾಗಲಿದ್ದು, ವಾಹನಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಷ್ಟರೊಳಗೆ ಮಳೆ ಬರಬಹುದು ಎಂಬ ನಿರೀಕ್ಷೆ ಇದೆ ಎಂದು ಹೇಳಿದರು.


ಶರಾವತಿ ಹಿನ್ನೀರಿನಲ್ಲಿ ನೀರು ಕೊರತೆ ಆದರೆ ತಾಲ್ಲೂಕಿನ ಕೆರೆಕಟ್ಟೆ, ಬಾವಿಗಳು ಬತ್ತು ಹೋಗುತ್ತಿದೆ. ಅದನ್ನು ಜನರು ಅನುಭವಿಸಿದ್ದಾರೆ. ನೀರು ಕಡಿಮೆ ಇರುವುದರಿಂದ ಹೆಚ್ಚುವರಿಯಾಗಿ ರ‍್ಯಾಂಪ್ ನಿರ್ಮಾಣ ಮಾಡಲು ತಿಳಿಸಲಾಗಿದೆ. ಒಂದೊಮ್ಮೆ ನೀರು ತೀರ ಕಡಿಮೆಯಾದರೆ ಮಿನಿಲಾಂಚ್, ಬೋಟ್ ಮೂಲಕ ಜನರನ್ನು ದಾಟಿಸಲಾಗುತ್ತದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ಸಹ ನೀಡಲಾಗಿದೆ ಎಂದು ಹೇಳಿದರು.
ಪ್ರಮುಖರಾದ ಅನಿತಾಕುಮಾರಿ, ಬಿ.ಎ.ಇಂದೂಧರ ಗೌಡ, ವೆಂಕಟೇಶ್, ಲಿಂಗರಾಜ್ ಆರೋಡಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Exit mobile version