Site icon TUNGATARANGA

ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಶಾಸಕ ಎಸ್.ಎನ್.ಚನ್ನ ಬಸಪ್ಪ ಚಾಲನೆ :

ಶಿವಮೊಗ್ಗ, ಜೂ.12 ರಾಜ್ಯದ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ರಾಜ್ಯ ಸರ್ಕಾರದ ಯೋಜನೆ ಉತ್ತಮವಾದ ಯೊಜನೆಯಾಗಿದ್ದು, ಮುಂದಿನ ಐದು ವರ್ಷಗಳ ಕಾಲ ನಿರಂತರವಾಗಿ ಮುಂದುವರೆಯಲೆಂದು ಆಶಿಸುವುದಾಗಿ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಹೇಳಿದರು.

ಅವರು ನಿನ್ನೆ ರಾಜ್ಯ ರಸ್ತೆ ಸಾರಿಗೆ ನಿಗಮವು
ರಾಜ್ಯದಾದ್ಯಂತ ಮಹಿಳೆಯರಿಗೆ ನಗರಸಾರಿಗೆ, ಸಾಮಾನ್ಯ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಈ ಮಹತ್ವದ ಯೋಜನೆಯು ಅತ್ಯಲ್ಪ ಅವಧಿಯಲ್ಲಿ ಜನಸಾಮಾನ್ಯರಿಗೆ ತಲುಪಿ, ಅರ್ಹ ಮಹಿಳೆಯರೆಲ್ಲರೂ‌ ಈ ಯೋಜನೆಯ ಸೌಲಭ್ಯ ಪಡೆಯುವಂತಾಗಲೆಂದು ಆಶಿಸಿದರು.

c

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶ್ರೀಮತಿ ಶಾರದಾ ಪೂರ್ಯಾನಾಯ್ಕ್ ಅವರು ಮಾತನಾಡಿ, ಮಹಿಳೆಯರು ರಾಜ್ಯದಾದ್ಯಂತ ಉಚಿತವಾಗಿ ಪ್ರಯಾಣಿಸಲು ಅಲ್ಪಾವಧಿಯಲ್ಲಿ ಯೋಜನೆಯನ್ನು ರೂಪಿಸಿ ಅನುಷ್ಠಾನಕ್ಕೆ ತಂದ ಸರ್ಕಾರದ ಕ್ರಮ ಸ್ವಾಗತಾರ್ಹವಾದುದು. ಹೆಚ್ಚಿನ ಸಂಖ್ಯೆಯ ಮಹಿಳೆಯರು ಈ ಯೋಜನೆಯ ಲಾಭ ಪಡೆದುಕೊಳ್ಳುವಂತಾಗಲಿ ಎಂದವರು ಆಶಿಸಿದರು.

ಸಮಾರಂಭದಲ್ಲಿ ಸಾರಿಗೆ‌ ನಿಗಮದ ಜಿಲ್ಲಾ ಅಧಿಕಾರಿ ವಿಜಯಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರು ಸೇರಿದಂತೆ ಕರ್ನಾಟಕ ರಾಜ್ಯದ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಈ ಉಚಿತ ಪ್ರಯಾಣದ ಸೌಲಭ್ಯ ಪಡೆಯಬಹುದಾಗಿದೆ. ಮಹಿಳಾ ಪ್ರಯಾಣಿಕರ ಪೈಕಿ ಆರು ವರ್ಷದಿಂದ 12 ವರ್ಷದವರೆಗಿನ ಬಾಲಕಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಸಹ ಪ್ರಯಾಣ ಬೆಳೆಸಬಹುದಾಗಿದೆ ಎಂದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಸಾರಿಗೆಗಳಲ್ಲಿ ಮಾತ್ರ ಮಹಿಳೆಯರು ರಾಜ್ಯದಾದ್ಯಂತ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂದರು.

ಮಹಿಳಾ ಪ್ರಯಾಣಿಕರಿಗೆ ದೂರದ ಯಾವುದೇ ಮಿತಿ ಇರುವುದಿಲ್ಲ ಹಾಗೂ ಪ್ರಯಾಣ ಸೌಲಭ್ಯವು ರಾಜ್ಯದ ಒಳಗೆ ಪ್ರಯಾಣಿಸಲು ಮಾತ್ರ ಅನ್ವಯಗೊಳಲಿದೆ. ಶಕ್ತಿ ಯೋಜನೆಯು ಪಾಸು ಸಾಂದರ್ಭಿಕ ಒಪ್ಪಂದ ಹಾಗೂ ಖಾಯಂ ಗುತ್ತಿಗೆ ಮುಂತಾದ ಸೇವೆಗಳಿಗೆ ಅನ್ವಯಗೊಳ್ಳುವುದಿಲ್ಲ ಎಂದವರು ನುಡಿದರು.

ಉಚಿತ ಪ್ರಯಾಣದ ಶಕ್ತಿ ಯೋಜನೆಯ ಸೌಲಭ್ಯ ಪಡೆಯಲಿಚ್ಚಿಸುವ ಮಹಿಳಾ ಪ್ರತಿನಿಧಿಗಳು ಆಧಾರ್ ಕಾರ್ಡ್ ವಾಹನ ಚಾಲನಾ ಪರವಾನಗಿ, ಚುನಾವಣಾ ಗುರುತಿನ ಚೀಟಿ, ರಾಜ್ಯ ಸರ್ಕಾರದ ಅಂಗವಿಕಲರ ಗುರುತಿನ ಚೀಟಿ ಮತ್ತಿತರ ಯಾವುದೇ ಒಂದು ದಾಖಲೆಯನ್ನು ಒದಗಿಸಿ, ಸೇವಾಸಿಂಧು ಮೂಲಕ ಅರ್ಜಿಗಳನ್ನು ಪಡೆದು ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯುವವರೆಗೆ ಪ್ರಯಾಣಿಸಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಿಎಸ್ ಅರುಣ್, ಮಾಜಿ ವಿಧಾನ ಪರಿಷತ್ ಸದಸ್ಯ ಆರ್ ಪ್ರಸನ್ನ ಕುಮಾರ್, ಮೇಯರ್ ಶಿವಕುಮಾರ್ ಮಹಾನಗರಪಾಲಿಕೆ ಸದಸ್ಯರಾದ ರೇಖಾ ರಂಗನಾಥ್, ಶ್ಮ ಯಮುನಾ ರಂಗೇಗೌಡ, ಯೋಗೇಶ್, ರಮೇಶ್ ಹೆಗಡೆ, ಜಿ.ಪಂ., ಜಿಲ್ಲಾಧಿಕಾರಿ ಡಾ. ಆರ್ ಸೆಲ್ಬಮಣಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Exit mobile version