Site icon TUNGATARANGA

ಸದೃಢ ಆರ್ಥಿಕ ಶಕ್ತಿಯಾಗಿ ಭಾರತ ದೇಶ – ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್

ಶಿವಮೊಗ್ಗ: ಭಾರತವು ವಿಶ್ವದಲ್ಲಿಯೇ ಅತ್ಯಂತ ಶಕ್ತಿಯುತ ದೇಶವಾಗಿ ರೂಪುಗೊಳ್ಳುತ್ತಿದ್ದು, ಆರ್ಥಿಕವಾಗಿ ಐದನೇ ಬಲಿಷ್ಠ ದೇಶವಾಗಿ ಗುರುತಿಸಿಕೊಂಡಿದೆ. ಶೀಘ್ರದಲ್ಲಿಯೇ ಮೂರನೇ ಶಕ್ತಿಯುತ ದೇಶವಾಗಿಸಲು ಕೇಂದ್ರ ಸರ್ಕಾರ ಪರಿಣಾಮಕಾರಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.


ಶಿವಮೊಗ್ಗ ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಕರಕುಶಲ ವಸ್ತುಗಳ ರಫ್ತು ಪ್ರಚಾರ ಮಂಡಳಿಯ ದಕ್ಷಿಣ ವಿಭಾಗೀಯ ಕಚೇರಿ ಸಹಯೋಗದಲ್ಲಿ ಆಯೋಜಿಸಿದ್ದ ರಫ್ತು ಕ್ಷೇತ್ರದ ದಾಖಲೆಗಳ ನಿರ್ವಹಣೆ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.


ಕೇಂದ್ರ ಸರ್ಕಾರವು ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತ,  ಸ್ಪಾರ್ಟ್ ಅಪ್, ಕೌಶಲ್ಯ ಭಾರತ, ಮಾರ್ಕೆಟಿಂಗ್ ಕುರಿತಾದ ಯೋಜನೆಗಳನ್ನು ಜಾರಿಗೊಳಿಸಿದೆ. ಇದರಿಂದ ಯುವ ಕೌಶಲ್ಯ ಉದ್ದಿಮೆದಾರರಿಗೆ ತುಂಬಾ ಉಪಯುಕ್ತ ಆಗಿದೆ. ಸರ್ಕಾರದ ಯೋಜನೆ ಹಾಗೂ ಕೌಶಲ್ಯದ ಜತೆಗೂಡಿ ಉದ್ಯಮ ಕ್ಷೇತ್ರದಲ್ಲಿ ಅತ್ಯಂತ ಯಶಸ್ವಿಯಾಗಬೇಕು ಎಂದು ತಿಳಿಸಿದರು.


ರಫ್ತು ಉದ್ಯಮದಲ್ಲಿ ಇರುವ ಅವಕಾಶಗಳ ಬಗ್ಗೆ ಯುವಜನರಿಗೆ ಜಾಗೃತಿ ಮೂಡಿಸುತ್ತಿರುವುದು ಅತ್ಯಂತ ಅಭಿನಂದನೀಯ ಕಾರ್ಯ ಆಗಿದೆ. ನಮ್ಮ ಜಿಲ್ಲಾ ಸಂಘವು ಸರ್ಕಾರ ಹಾಗೂ ಉದ್ಯಮಿದಾರರ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದೆ. ಉದ್ಯಮದಾರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ ಕಾರ್ಯ ನಡೆಸುತ್ತಿದೆ ಎಂದರು.


ರಫ್ತು ಉದ್ಯಮದಲ್ಲಿ ನಿರ್ವಹಿಸಲು ವಿದೇಶಗಳಲ್ಲಿನ ನಿಯಮ ಹಾಗೂ ಕಾನೂನುಗಳ ಬಗ್ಗೆ ತಿಳವಳಿಕೆ ಹೊಂದಬೇಕು. ನೀವು ರಫ್ತು ಮಾಡಲು ಇಚ್ಚಿಸುವ ದೇಶದ ರಫ್ತು ನೀತಿಗಳ ಬಗ್ಗೆ ಜ್ಞಾನ ಹೊಂದಿದಲ್ಲಿ ಉದ್ಯಮದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.


ಇಪಿಸಿಎಚ್ ದಕ್ಷಿಣ ವಿಭಾಗೀಯ ಸಂಚಾಲಕ ಕೆ.ಎಲ್.ರಮೇಶ್ ಮಾತನಾಡಿ, ಕೇಂದ್ರ ಸರ್ಕಾರ ಯುವಜನರಿಗೆ ಪ್ರೋತ್ಸಾಹಿಸುವ ದೃಷ್ಠಿಯಿಂದ ಉತ್ತಮ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ. ಯುವ ಉದ್ದಿಮೆ ರಫ್ತುದಾರರು ಆಸಕ್ತಿ ವಹಿಸಿ ಕಾರ್ಯ ನಿರ್ವಹಿಸಬೇಕು. ಭಾರತದ ಆರ್ಥಿಕ ಶಕ್ತಿ ವೃದ್ಧಿಸುವಲ್ಲಿ ಮಹತ್ತರ ಪಾತ್ರ ವಹಿಸಬೇಕು ಎಂದು ತಿಳಿಸಿದರು.


ಇಪಿಸಿಎಚ್ ದಕ್ಷಿಣ ವಿಭಾಗೀಯ ಮುಖ್ಯಸ್ಥೆ ಪಿ.ಎಲ್.ಶ್ರೀದೇವಿ ರಫ್ತು ಉದ್ಯಮ, ದಾಖಲೆಗಳ ನಿರ್ವಹಣೆ ಮಾಡುವ ಕುರಿತು ಮಾಹಿತಿ ನೀಡಿದರು. ಶಿವಮೊಗ್ಗ ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ನಿರ್ದೇಶಕರಾದ ಬಿ.ಆರ್.ಸಂತೋಷ್, ಇ.ಪರಮೇಶ್ವರ್, ಗಣೇಶ್ ಎಂ.ಅಂಗಡಿ, ಪ್ರದೀಪ್ ವಿ ಯಲಿ, ಎಜುರೈಟ್ ಎಚ್‌ಒಡಿ ಸೀಮಾ ಮತ್ತಿತರರು ಉಪಸ್ಥಿತರಿದ್ದರು.

Exit mobile version