Site icon TUNGATARANGA

ಅಕ್ರಮ ಮದ್ಯ ಮಾರಾಟ | ಹೆಲ್ಮೆಟ್ ವಿಚಾರದಲ್ಲಿ ಪೊಲೀಸರು ಕಿರುಕುಳದ ವಸೂಲಿಗಿಳಿದರೆ ನನ್ನ ಗಮನಕ್ಕೆ ತನ್ನಿ: SP ಮಿಥುನ್ ಕುಮಾರ್

ಸಾಗರ : ಪೊಲೀಸ್ ಇಲಾಖೆ ಜೊತೆ ಸಾರ್ವಜನಿಕರ ಸಹಕಾರ ಅತ್ಯಾಗತ್ಯ. ಇಲಾಖೆಯೊಂದಿಗೆ ಸಹಕಾರ ನೀಡಿದರೆ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು.


ಇಲ್ಲಿನ ನೆಹರೂ ನಗರದಲ್ಲಿರುವ ಶಾದಿ ಮಹಲ್‌ನಲ್ಲಿ ಗುರುವಾರ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾತ್ರಿಗಸ್ತು ಹೆಚ್ಚಿಸುವ ನಿಟ್ಟಿನಲ್ಲಿ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ಹೇಳಿದರು.


ಪ್ರತಿವಾರ್ಡ್‌ನಲ್ಲಿ ಬೀಟ್ ಪೊಲೀಸರ ಜೊತೆಗೆ ಸ್ಥಳೀಯವಾಗಿ ಹದಿನೈದರಿಂದ ಇಪ್ಪತ್ತು ಯುವಕರು ಕೈಜೋಡಿಸಬೇಕು. ನಿಮ್ಮ ವ್ಯಾಪ್ತಿಯಲ್ಲಿ ಐದಾರು ಜನರು ಪ್ರತಿದಿನ ರಾತ್ರಿ ಗಸ್ತು ತಿರುಗುವತ್ತ ಗಮನ ಹರಿಸಿ. ಗಸ್ತು ಸಂದರ್ಭದಲ್ಲಿ ಯಾವುದಾದರೂ ಕಾನೂನುಬಾಹಿರ ಚಟುವಟಿಕೆ ಕಂಡು ಬಂದರೆ ಅದನ್ನು ಬೀಟ್ ಪೊಲೀಸರ ಗಮನಕ್ಕೆ ತನ್ನಿ. ಇದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.


ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಓಡಿಸುವುದು ಕಡ್ಡಾಯ. ಒಂದೊಮ್ಮೆ ಹೆಲ್ಮೆಟ್ ಧರಿಸದೆ ಇದ್ದಾಗ ಪೊಲೀಸರು ಕಿರುಕುಳ ನೀಡುವುದು, ಹಣ ವಸೂಲಿ ಮಾಡುತ್ತಿರುವ ಪ್ರಕರಣ ಕಂಡು ಬಂದರೆ ನನ್ನ ಗಮನಕ್ಕೆ ತನ್ನಿ. ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತದೆ. ಮಿಲ್ಟ್ರಿ ಹೋಟೆಲ್‌ಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ನಿಖರವಾದ ಹೋಟೆಲ್ ಹೆಸರು ನಮೂದಿಸಿ ದೂರು ನೀಡಿ, ಅಂತಹ ಹೋಟೆಲ್ ಮೇಲೆ ದಾಳಿ ಮಾಡಿ ಕಾನೂನುಕ್ರಮ ಜರುಗಿಸಲಾಗುತ್ತದೆ. ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಇಲಾಖೆ ತಕ್ಷಣ ಕ್ರಮ ಕೈಗೊಳ್ಳುತ್ತದೆ ಎಂದರು.


ನಗರಸಭಾ ಸದಸ್ಯೆ ನಾದೀರಾ ಪರ್ವಿನ್ ಮಾತನಾಡಿ, ಪೊಲೀಸ್ ಇಲಾಖೆ ಜನರ ಜೊತೆ ಉತ್ತಮವಾಗಿ ಸ್ಪಂದಿಸುತ್ತಿದೆ. ಎರಡು ತಿಂಗಳಿಗೊಮ್ಮೆ ಇಂತಹ ಜನ ಸಂಪರ್ಕ ಸಭೆ ನಡೆಸಿದರೆ ಸ್ಥಳೀಯರಿಗೆ ತಮ್ಮ ಸಮಸ್ಯೆಗಳನ್ನು ಪೊಲೀಸ್ ಇಲಾಖೆಗೆ ತಿಳಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.


ವೃತ್ತ ನಿರೀಕ್ಷಕರಾದ ಸೀತಾರಾಮ್, ಪ್ರವೀಣಕುಮಾರ್, ಸಬ್ ಇನ್ಸ್‌ಪೆಕ್ಟರ್ ಹೊಳಬಸಪ್ಪ ಇನ್ನಿತರರು ಹಾಜರಿದ್ದರು. ಸಾರ್ವಜನಿಕರು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ವಿವಿಧ ಸಮಸ್ಯೆಗಳ ಕುರಿತು ಗಮನ ಸೆಳೆದರು

Exit mobile version