Site icon TUNGATARANGA

ಉಡುಪಿಯ ಪ್ರಸಾದ್ ನೇತ್ರಾಲಯ ಹಾಗೂ ಶಿವಮೊಗ್ಗದ ಮಲ್ನಾಡ್ ಆಸ್ಪತ್ರೆ ಜಂಟಿಯಾಗಿ ಶಿವಮೊಗ್ಗದಲ್ಲಿ ನೂತನ ಆಸ್ಪತ್ರೆ ಆರಂಭ |ಏನೆಲ್ಲಾ ಸ್ಪೆಷಾಲಿಟಿ ಇವೇ ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು ವಿವರ

ಶಿವಮೊಗ್ಗ: ಉಡುಪಿಯ ಪ್ರಸಾದ್ ನೇತ್ರಾಲಯ ಹಾಗೂ ಶಿವಮೊಗ್ಗದ ಮಲ್ನಾಡ್ ಕಣ್ಣಿನ ಆಸ್ಪತ್ರೆ ಜಂಟಿಯಾಗಿ ಶಿವಮೊಗ್ಗದಲ್ಲಿ ನೂತನ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಆರಂಭಿಸಲಾಗುವುದು ಎಂದು ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು ತಿಳಿಸಿದರು.


ಅವರು ಇಂದು ಮಥುರಾ ಪ್ಯಾರಾಡೈಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉಡುಪಿಯಲ್ಲಿರುವ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯದ ಅಂಗಸಂಸ್ಥೆಯಾದ ಮಲ್ನಾಡ್ ಕಣ್ಣಿನ ಆಸ್ಪತ್ರೆಯ ಉದ್ಘಾಟನಾ ಸಮಾರಂಭ ಜೂ.೮ರ ನಾಳೆ ಬೆಳಿಗ್ಗೆ ೧೧-೩೦ಕ್ಕೆ ವಿನಾಯಕ ನಗರದಲ್ಲಿರುವ ರೋಟರಿ ಬ್ಲಡ್ ಬ್ಯಾಂಕ್ ಸಮೀಪದ ಕಟ್ಟಡದಲ್ಲಿ ನಡೆಯಲಿದೆ ಎಂದರು.


ಎರಡು ದಶಕಗಳಿಂದ ಉಡುಪಿಯಲ್ಲಿ ನೇತ್ರ ಚಿಕಿತ್ಸೆಯ ಮೂಲಕ ಜನರ ದೃಷ್ಟಿ ಕಾಪಾಡುವ ಕಾರ್ಯ ಮಾಡುತ್ತ ಬಂದಿರುವ ಪ್ರಸಾದ್ ನೇತ್ರಾಲಯ ಮಂಗಳೂರು, ಸುಳ್ಯ, ಹಾಗೂ ತೀರ್ಥಳ್ಳಿಯಲ್ಲಿ ಕಣ್ಣಿನ ಆಸ್ಪತ್ರೆಗಳ ಮೂಲಕ ಸೇವೆ ನಡೆಸುತ್ತಾ ಬಂದಿದೆ. ಉಡುಪಿಯಂತಹ ತೃತೀಯ ಸ್ಥರದ ನಗರದಲ್ಲಿ ಕಣ್ಣಿನ ಎಲ್ಲಾ ತೊಂದರೆಗಳಿಗೂ ಒಂದೇ ಸೂರಿನಡಿ ಚಿಕಿತ್ಸೆ ದೊರಕುವಂತೆ ಮಾಡಿದ್ದು, ಕಣ್ಣಿನ ಎಲ್ಲಾ ತೊಂದರೆಗಳಿಗೂ ಅತ್ಯಾಧುನಿಕ ತಂತ್ರಜ್ಞಾನದ ಅಂತರಾಷ್ಟ್ರೀಯ ಗುಣಮಟ್ಟದ ಚಿಕಿತ್ಸೋಪಕರಣದ ಮುಖಾಂತರ ಚಿಕಿತ್ಸೆ ನೀಡಲಾಗುತ್ತದೆ. ಈ ಆಸ್ಪತ್ರೆ ಜಿಲ್ಲೆ ಹಾಗೂ ನೆರೆಯ ಜಿಲ್ಲೆಯ ಜನರಿಗೆ ಅನುಕೂಲವಾಗುತ್ತದೆ ಎಂದರು.


ಗ್ರಾಮೀಣ ಪ್ರದೇಶದಲ್ಲಿ ಉಚಿತ ನೇತ್ರ ಚಿಕಿತ್ಸಾ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಸಾದ್ ನೇತ್ರಾಲಯವು ತನ್ನ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಮೂಲಕ ಉಚಿತ ನೇತ್ರ ಚಿಕಿತ್ಸಾ ಶಿಬಿರ ನಡೆಸಿಕೊಂಡು ಬರುತ್ತಿದ್ದು, ಈಗಾಗಲೇ ೧೦ಸಾವಿರ ಶಿಬಿರ ಗಳಲ್ಲಿ ೨೦ಲಕ್ಷಕ್ಕೂ ಅಧಿಕ ಜನರಿಗೆ ತಪಾಸಣೆ, ೨ಲಕ್ಷ ಶಸ್ತ್ರ ಚಿಕಿತ್ಸೆ, ೭ ಲಕ್ಷ ಉಚಿತ ಕನ್ನಡಕ ವಿತರಣೆ, ೬೬೦ಕ್ಕೂ ಹೆಚ್ಚು ಕಣ್ಣಿನ ಕಸಿ ಚಿಕಿತ್ಸೆ ನಡೆಸಿದ ಹೆಗ್ಗಳಿಕೆ ಹೊಂದಿದೆ. ಹಾಗೂ ರಾಜ್ಯದ ಏಳು ಜಿಲ್ಲೆ ಮತ್ತು ನಾಲ್ಕು ರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತಿದೆ ಎಂದರು.


ಮಲೆನಾಡು ಕಣ್ಣಿನ ಆಸ್ಪತ್ರೆಯನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಲಿದ್ದು, ಖ್ಯಾತ ಜ್ಯೋತಿಷಿ ಕಬಿಯಾಡಿ ಜಯರಾಮ್ ಆಚಾರ್ಯ ಜ್ಯೋತಿ ಬೆಳಗಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಎಸ್. ರುದ್ರೇಗೌಡ್ರು, ಎಸ್.ಪಿ.ದಿನೇಶ್, ಎಸ್.ಎಸ್ ಜ್ಯೋತಿಪ್ರಕಾಶ್, ಆರತಿ ಪ್ರಕಾಶ್, ಎನ್.ಜೆ.ರಾಜಶೇಖರ್, ಕೆ. ರಘುರಾಮ ರಾವ್, ಪಿ.ಜಯಪ್ಪ ಆಗಮಿಸಲಿದ್ದಾರೆ. ಶಾಸಕ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಜ್ಞವೈದ್ಯ ಡಾ. ಬಾಲಚಂದ್ರ ಸಿ. ತೆಗ್ಗಿಹಳ್ಳಿ, ಡಾ. ಅಪರ್ಣಾ ಜೆ., ರಶ್ಮಿ ಕೃಷ್ಣಪ್ರಸಾದ್ ಉಪಸ್ಥಿತರಿದ್ದರು.

Exit mobile version