ಸಾಗರ : ಚುನಾವಣೆಯಲ್ಲಿ ಸೋತ ನಂತರ ಹರತಾಳು ಹಾಲಪ್ಪ ಹತಾಶರಾಗಿ ನನ್ನ ವಿರುದ್ದ ಅನಗತ್ಯ ಆರೋಪ ಮಾಡುತ್ತಿದ್ದಾರೆ. ಸಂಪಳ್ಳಿ-ಕೋಟೆಕೊಪ್ಪ ಜಮೀನಿಗೂ ನನಗೂ ಸಂಬಂಧವಿಲ್ಲ ಎಂದು ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಸೋಮಶೇಖರ ಲ್ಯಾವಿಗೆರೆ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಬೇಳೂರು
ಪರವಾಗಿ ಕೆಲಸ ಮಾಡಿ, ಚುನಾವಣೆಯಲ್ಲಿ ಗೆಲ್ಲಿಸಿದ್ದೇನೆ ಎಂಬ ಸೇಡಿನಿಂದ ಹರತಾಳು ಹಾಲಪ್ಪ ಇಂತಹ ಸುಳ್ಳು ಆರೋಪ ಮಾಡುತ್ತಿದ್ದು, ತಮ್ಮ ಅಕ್ಕಪಕ್ಕದಲ್ಲಿ ಒಳ್ಳೆಯ ಸಲಹೆ ಕೊಡುವವರನ್ನು ಇರಿಸಿಕೊಂಡು ನೇರ ಮಾರ್ಗದಲ್ಲಿ ರಾಜಕೀಯ ಮಾಡಲಿ ಎಂದರು.
ಸಂಪಳ್ಳಿ ಕೋಟೆಕೊಪ್ಪ ಜಮೀನಿನ ವಿವಾದಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಮುಖಂಡನಾಗಿ ನಾನು ವಿವಾದ ಇತ್ಯರ್ಥ ಪಡಿಸಲು ಸ್ಥಳಕ್ಕೆ ಹೋಗಿದ್ದೇನೆಯೆ ವಿನಃ ವೈಯಕ್ತಿಕ ಹಿತಾಸಕ್ತಿ ಏನೂ ಇರಲಿಲ್ಲ. ಒಕ್ಕಲೆಬ್ಬಿಸುತ್ತಾರೆ ಎನ್ನುವ ಹೆಸರಿನಲ್ಲಿ ಮಹಿಳೆಯೊಬ್ಬರು ಮೈಮೇಲೆ ವಿಷ ಸುರಿದು ಕೊಂಡಿದ್ದಾರೆಯೆ ವಿನಃ ದೌರ್ಜನ್ಯ ಯಾರೂ ನಡೆಸಿರಲಿಲ್ಲ. ಜಮೀನನ್ನು ರತ್ನಾಕರ ಶೆಟ್ಟಿ ಎಂಬುವವರು ಖರೀದಿ ಮಾಡಿದ್ದಾರೆ. ಪ್ರಕರಣದಲ್ಲಿ ನನ್ನ ಮತ್ತು ಹೊಸನಗರ ಭಾಗದ ಮುಖಂಡ ಸಣ್ಣಕ್ಕಿ ಮಂಜು ಹೆಸರನ್ನು ಮಾಜಿ ಸಚಿವ ಹಾಲಪ್ಪ ಎಳೆದು ತರುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಈಗಾಗಲೆ ಹರತಾಳು ಹಾಲಪ್ಪ ತಮ್ಮ ದಬ್ಬಾಳಿಕೆ ನೀತಿ ಮತ್ತು ಅಕ್ಕಪಕ್ಕದಲ್ಲಿರುವ ಕೆಲವು ಗೂಂಡಾಗಳ ಮಾತನ್ನು ಕೇಳಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ದುರಾದೃಷ್ಟವೆಂದರೆ ಮಾಜಿ ಸಚಿವರ ಪಕ್ಕದಲ್ಲಿ ನಿಂತು ಪ್ರತಿಭಟನೆಯಲ್ಲಿ ಪಾಲ್ಗೊಂಡ ರತ್ನಾಕರ ಹೊನಗೋಡು ಒಂದು ಕಾಲದಲ್ಲಿ ಕಾಲಿಗೆ ಚಪ್ಪಲಿ ಹಾಕಲೂ ಸಾಧ್ಯವಾಗದಷ್ಟು ಬಡತನದಲ್ಲಿದ್ದವರು. ಆನಂದಪುರಂ ಪೊಲೀಸ್ ಠಾಣೆ ಜಾಗ, ನಾರಗೋಡು ಖಾತೆ ಕಾನು ಜಾಗ ಒತ್ತುವರಿ ಮಾಡಲು ಪ್ರಯತ್ನಿಸಿ ವಿಫಲವಾದವರು. ಮರ ಕಡಿದ ಜೈಲಿಗೆ ಹೋಗಿ ಬಂದ ಹೆಗ್ಗಳಿಕೆ ಸಹ ರತ್ನಾಕರ ಹೊನಗೋಡು ಅವರದ್ದಾಗಿದೆ. ಅಂತಹವರನ್ನು ಪಕ್ಕದಲ್ಲಿ ಇರಿಸಿಕೊಂಡು ಪ್ರತಿಭಟನೆ ಮಾಡುವ ಹಾಲಪ್ಪ ಅವರ ನಡೆಯೆ ಅನುಮಾನಾಸ್ಪದವಾಗಿದೆ ಎಂದು ದೂರಿದರು.
ಜಮೀನು ಸಾಗುವಳಿ ಮಾಡುತ್ತಿರುವ ಕುಟುಂಬಸ್ತರಾದ ಸತ್ಯಪ್ಪ ಮಾತನಾಡಿ, ಹಿಂದೆ ಹಾಲಪ್ಪ ಶಾಸಕರಾಗಿದ್ದಾಗ ಜಮೀನು ವಿವಾದ ಬಗೆಹರಿಸಿಕೊಡುವಂತೆ ಅವರ ಬಳಿ ನಾವು ಹೋಗಿದ್ದೇವು. ಆದರೆ ಹಾಲಪ್ಪ ಹರತಾಳು ಸರಿಯಾಗಿ ಸ್ಪಂದಿಸಿರಲಿಲ್ಲ. ಇದೀಗ ನಮ್ಮ ಜಮೀನು ಒತ್ತುವರಿ ಮಾಡಿದವರ ಪರವಾಗಿ ನಿಲ್ಲುತ್ತಿದ್ದಾರೆ. ಜಮೀನಿಗೆ ಸಂಬಂಧಪಟ್ಟಂತೆ ನಮ್ಮ
ಹಿರಿಯ ಸಹೋದರ ಪುಟ್ಟಪ್ಪ ನಮಗೆ ಮೋಸ ಮಾಡಿದ್ದಾರೆ. ಅಂತಹ ಮೋಸ ಮಾಡಿದವರ ಪರ ಮಾಜಿ ಸಚಿವರು ನಿಲ್ಲುತ್ತಿರುವುದು ಬೇಸರದ ಸಂಗತಿ ಎಂದರು.
ಗೋಷ್ಟಿಯಲ್ಲಿ ತಾರಾಮೂರ್ತಿ, ಸಂದೇಶ್, ರಾಕೇಶ್, ರಘು ಹಾಜರಿದ್ದರು