ಶಿವಮೊಗ್ಗ : ವಿದ್ಯಾರ್ಥಿಗಳು ಸಮಸ್ಯೆಗಳಿಂದ ಓಡಿ ಹೋಗದೇ ಅದನ್ನು ಎದುರಿಸುವ ಸಂಸ್ಕಾರ ಕೌಶಲ್ಯತೆ ಯುವ ಸಮೂಹದಾಗಬೇಕಿದೆ ಎಂದು ಮಂಗಳೂರಿನ ಮೆಸ್ಕಾಂ ಸೂಪರಿಂಟೆಂಡಿಂಗ್ ಇಂಜಿನಿಯರ್ ಜಿ.ಎನ್.ಚೈತನ್ಯ ಅಭಿಪ್ರಾಯಪಟ್ಟರು...
ಶುಕ್ರವಾರ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಏರ್ಪಡಿಸಿದ್ದ ‘ಪವರ್ ಟ್ರಾನ್ – 2023’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಯಶಸ್ಸಿನ ಮೂಲ ತಳಹದಿ ಶಿಕ್ಷಕರು. ಪುಸ್ತಕಗಳನ್ನು ನೋಡಿ ಪಾಠ ಮಾಡುವ ಶಿಕ್ಷಕರಿಗಿಂತ ಮನಸ್ಸು ಪೂರ್ತಿಯಾಗಿ ಪಾಠ ಮಾಡುವ ಶಿಕ್ಷಕ ಉತ್ತಮ ಗುರುವಾಗಿ ಗುರುತಿಸಿಕೊಳ್ಳುತ್ತಾರೆ. ಶಿಕ್ಷಕರು ನಮ್ಮ ಬದುಕಿನ ದೀಪದ ಕ್ಯಾಂಡಲ್ ಗಳಾಗಿದ್ದು, ತಾವು ಉರಿದು ವಿದ್ಯಾರ್ಥಿಗಳಿಗೆ ಬೆಳಕು ನೀಡುವ ಹೃದಯ ವೈಶಾಲ್ಯತೆ ಹೊಂದಿರುತ್ತಾರೆ.
ಕನಸುಗಳನ್ನು ಕಾಣಲು ಪ್ರಾರಂಭಿಸಿ. ನಿದ್ದೆ ಮಾಡಲು ಬಿಡದ ಕನಸುಗಳು ನಿಮ್ಮದಾಗಬೇಕಿದೆ. ಅದುವೇ ಯಶಸ್ವಿ ಬದುಕಿನ ಗುರಿಯಾಗಿ ಬದಲಾಗಲಿದೆ. ನಮ್ಮ ಭವಿಷ್ಯವು ವಿದ್ಯಾರ್ಥಿ ಜೀವನದಲ್ಲಿ ನಾವು ಅಳವಡಿಸಿಕೊಂಡ ಕೌಶಲ್ಯತೆಗಳ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ.
ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ ಅರವತ್ತಕ್ಕು ಹೆಚ್ಚು ಹಿರಿಯ ವಿದ್ಯಾರ್ಥಿಗಳು ಇಂದು ಮೆಸ್ಕಾಂ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹ ಹಿರಿಯ ವಿದ್ಯಾರ್ಥಿಗಳ ಸಾಧನೆಯೆ ವಿದ್ಯಾಸಂಸ್ಥೆಗಳ ಉನ್ನತಿಯ ಕುರಿತು ಸದಾ ಪ್ರತಿಧ್ವನಿಸುತ್ತಿರುತ್ತದೆ ಎಂದು ಹೇಳಿದರು.
ಶಿವಮೊಗ್ಗ ಕೆಪಿಟಿಸಿಎಲ್ ಸೂಪರಿಂಟೆಂಡಿಂಗ್ ಇಂಜಿನಿಯರ್ ಕೆ.ಸುರೇಶ್ ಮಾತನಾಡಿ, ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸಲು ಅನೇಕ ಸಹ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಕತ್ತಲು ರಹಿತ ಕರ್ನಾಟಕ ನಿರ್ಮಾಣ ಮಾಡುವಲ್ಲಿ ಅನೇಕ ನಾವೀನ್ಯ ಯೋಜನೆಗಳನ್ನು ಅಳವಡಿಸಿಕೊಂಡಿದ್ದೇವೆ. ಓದಿನ ಜೊತೆಗೆ ವಿದ್ಯಾರ್ಥಿಗಳು ಇಂತಹ ಆಧುನಿಕ ಯೋಜನೆಗಳ ಬಗ್ಗೆ ಅರಿವು ಪಡೆಯಿರಿ. ಉತ್ತಮ ಎಲೆಕ್ಟ್ರಿಕಲ್ ಎಂಜಿನಿಯರ್ ಸದಾ ಬೇಡಿಕೆಯಲ್ಲಿರುತ್ತಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್, ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಮಾತನಾಡಿದರು. ಜೆ.ಎನ್.ಎನ್.ಸಿ.ಇ ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ವಿಭಾಗದ ಮುಖ್ಯಸ್ಥರಾದ ಡಾ.ತೇಜಸ್ವಿ, ಸಹ ಪ್ರಾಧ್ಯಾಪಕರಾದ ಡಾ.ಹೆಚ್.ಬಿ.ಸುರೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.