Site icon TUNGATARANGA

ಜಿಲ್ಲೆಯ ಅಕ್ರಮಗಳಿಗೆ ಪೊಲೀಸರಿಂದ ಬಿಗ್‌ಬ್ರೇಕ್


ಶಿವಮೊಗ್ಗ, ಅ.೨೧:
ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು, ಕಳ್ಳತನ, ಕೊಲೆ,ಜೂಜು, ಗಾಂಜಾ ಮುಂತಾದವುಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ಜರುಗಿಸಿದ್ದು, ಈಗಾಗಲೇ ಹಲವು ಪ್ರಕರಣಗಳನ್ನು ಬೇಧಿಸಲಾಗಿದೆ ಎಂದು ಎಸ್ಪಿ ಶಾಂತರಾಜ್ ತಿಳಿಸಿದರು.
ಶಿರಾಳಕೊಪ್ಪದ ಅನಾಮಧೇಯ ಗಂಡಸಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಕೊಲೆಯಾದ ರವೀಂದ್ರ ಎಂಬ ಸೊರಬ ತಾಲೂಕು ಹುಣಸವಳ್ಳಿ ವ್ಯಕ್ತಿಯ ಗುರುತುಪತ್ತೆ ಹಚ್ಚಿ ಮಂಜುಳಾ ಬಾಯಿ ಹಾಗೂ ತುಕ್ಕಾರಾಜು ಎಂಬುವವರನ್ನು ಬಂಧಿಸಲಾಗಿದೆ. ಇವರ ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವುದಾಗಿ ತನಿಖೆಯಲ್ಲಿ ತಿಳಿಸಿದ್ದಾರೆ ಎಂದು ಎಸ್ಪಿ ವಿವರಿಸಿದರು.
ಭದ್ರಾವತಿ ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಂತ ನಗರದ ಶಾರುಖ್ ಖಾನ್ ಎಂಬಾತನನ್ನು ಕೊಲೆ ಮಾಡಿದ ರಮೇಶ ಯಾನೆ ಹಂದಿ ರಮೇಶ್, ವೆಂಕಟರಾಮ, ಚಂದ್ರ, ಕಾರ್ತಿಕ್, ಮಧುಸೂದನ, ರಮೇಶ ಹಾಗೂ ಕೆಳದಿ ರಮೇಶ್ ಎಂಬುವವರನ್ನು ಬಂಧಿಸಲಾಗಿದೆ.
ಸೊರಬದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ೩ ಜನರನ್ನು, ದರೋಡೆಗ ಹೊಂಚು ಹಾಕುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ. ಮನೆಗಳ್ಳತನ ಮಾಡುತ್ತಿದ್ದ ಅಂತರಜಿಲ್ಲಾ ಕಳ್ಳರನ್ನು ಬಂಧಿಸಿ ಅವರಿಂದ ೬.೪೨ ಲಕ್ಷ ರೂ., ೫.೯೮ ಲಕ್ಷ ಬಂಗಾರದ ಆಭರಣ, ೨೯ ಸಾವಿರ ಮೌಲ್ಯದ ಬೆಳ್ಳಿ, ಟಿವಿ ಸೇರಿದಂತೆ ಲಕ್ಷಾಂತರ ರೂ.ಮೌಲ್ಯದ ವಸ್ತುಗಳನ್ನು ಭದ್ರಾವತಿ ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆನವಟ್ಟಿಯಲ್ಲಿ ಮನೆಗಳ್ಳರನ್ನು ಬಂಧಿಸಿ ೧.೧೨ ಲಕ್ಷ ರೂ.ಮೌಲ್ಯದ ಬಂಗಾರ ವಶಪಡಿಸಿಕೊಂಡರೆ, ದೇವಸ್ಥಾನದಲ್ಲಿ ಹುಂಡಿ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು  ಕೂಡ ಬಂಧಿಸಲಾಗಿದೆ. ಇದರ ಜೊತೆಗೆ ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ೧೮ ಆರೋಪಿಗಳನ್ನು, ಗಾಂಜಾ ಬೆಳೆಯುತ್ತಿದ್ದ ೧೮೧ ಆರೋಪಿಗಳನ್ನು ಬಂಧಿಸಲಾಗಿದೆ. ಕ್ರಿಕೆಟ್ ಬೆಟ್ಟಿಂಗ್,ಮಟ್ಕಾ ಜೂಜಾಟ, ಎಸ್ಪೀಟು ಜೂಜಾಟದಲ್ಲಿ ತೊಡಗಿದ್ದ ಹಲವರನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.
ಒಟ್ಟಾರೆ ಶಿವಮೊಗ್ಗ ಜಿಲ್ಲೆಯ ಎಲ್ಲಾ ಅಕ್ರಮ ಚಟುವಟಿಕೆಗಳಿಗೆ ಪೊಲೀಸ್ ಇಲಾಖೆ ಬಿಗಿ ನಿಯಂತ್ರಣ ಕಲ್ಪಿಸಲಾಗಿದೆ ಎಂದರು.

Exit mobile version