Site icon TUNGATARANGA

ಜೋಡಿಕೊಲೆ-ಅತ್ಯಾಚಾರ ಆರೋಪಿಗಳ ಬಂಧನ: ವಿಶೇಷ ತಂಡದ ಕಾರ್ಯಕ್ಕೆ ಎಸ್ಪಿ ಮೆಚ್ಚುಗೆ


ಶಿವಮೊಗ್ಗ, ಅ.21:
ಬ್ಲಾಕ್‌ಮೇಲ್ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಇಬ್ಬರ ಹತ್ಯೆ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲಾಗಿದ್ದ ದೂರಿನ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಾಗರ ತಾಲ್ಲೂಕಿನ ಹಳೇಇಕ್ಕೇರಿ ಕುನ್ನಿಕೋಡು ಗ್ರಾಮದಲ್ಲಿ ನಡೆದ ತಾಯಿ-ಮಗನ ಜೋಡಿ ಕೊಲೆ ಹಾಗೂ ಮಗನ ಪತ್ನಿಯ ಅತ್ಯಾಚಾರಕ್ಕೆ ಸಂಬಂಧಪಟ್ಟಂತೆ ಕಳೆದ ೧೦ದಿನಗಳಿಂದ ದಾಖಲಾಗಿದ್ದ ದೂರಿನ ಅನುಸಾರ ಆರೋಪಿಗಳನ್ನು ಬಂಧಿಸಲಾಗಿದೆ.
ಇಂದು ಮದ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರಣೆ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಎಂ.ಶಾಂತರಾಜು ಅವರು, ಜೋಡಿ ಕೊಲೆ ಹಾಗೂ ಅತ್ಯಾಚಾರ ಪ್ರಕರಣದ ವಿವರ ನೀಡಿದರು.
ಘಟನೆಯ ವಿವರ: ಖಾಸಗಿ ವಿಡಿಯೋಗಳನ್ನು ಮುಂದಿಟ್ಟುಕೊಂಡು ಯುವತಿಯೋರ್ವಳಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದ ವಿವಾಹಿತ ಯುವಕನ ಮೇಲೆ ಪೇಮಿಯೊಂದಿಗೆ ಸೇರಿ ಕೊಲೆ ಮಾಡಿದ ಘಟನೆ ಇದಾಗಿದೆ.  ಶೃತಿ ಎಂಬಾಕೆ ಭರತ್ ಜೊತೆ ಸೇರಿ ಪ್ರವೀಣ್ ಹಾಗೂ ಅವರ ತಾಯಿಯನ್ನು ಕೊಲೆ ಮಾಡಿದ್ದರು.  ಅ.10ರಂದು ಸಾಗರ ತಾಲ್ಲೂಕಿನ ಕುನ್ನಿಕೋಡುನಲ್ಲಿ ಬಂಗಾರಮ್ಮ(65), ಅವರ ಮಗ ಪ್ರವೀಣ್ (24) ಜೋಡಿ ಕೊಲೆಯಾಗಿತ್ತು. ಮೃತ ಪ್ರವೀಣನ ಪತ್ನಿ ಮೇಲೆ ಆರೋಪಿ ಭರತ್ ಅತ್ಯಾಚಾರವೆಸಗಿ ನಾಲ್ಕು ಸಾವಿರ ಹಣ ಕೂಡ ಕಸಿದುಕೊಂಡು ಪರಾರಿಯಾಗಿದ್ದರು.
ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಸಾಗರ ಉಪ ವಿಭಾಗ ಡಿವೈಎಸ್ಪಿ ವಿನಾಯಕ ಶಟಗಿರಿಯವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡವು ಆರೋಪಿಗಳಾದ ಭರತ್ ಮತ್ತು ಶೃತಿ ಎಂಬುವರನ್ನು ಡಿಸಿಐಬಿ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ, ಮಹಿಳಾ ಪೊಲೀಸ್ ಠಾಣೆಯ ಇನ್‌ಪೆಕ್ಟರ್ ಅಭಯ್‌ಪ್ರಕಾಶ್, ವಿನೋಬನಗರ ಪಿಎಸ್‌ಐ ಉಮೇಶ್ ಹಾಗೂ ಸಾಗರ ಗ್ರಾಮಾಂತರ ಪಿಎಸ್‌ಐ ಭರತ್ ಕುಮಾರ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ಈ ತಂಡ ಯಶಸ್ವಿ ಕಾರ್ಯಚರಣೆ ನಡೆಸಿದ್ದು, ಆರೋಪಿಗಳನ್ನು ಬಂಧಿಸಿದೆ.
ಆರೋಪಿ ಭರತ್‌ನನ್ನು ಮಹಜರ್‌ಗೆ ಕರೆದುಕೊಂಡು ಬರುವಾಗ ಆತ ಏಕಾಏಕಿ ಕೈಗೆ ಹಾಕಿದ್ದ ಲೀಡಿಂಗ್ ಚೈನನ್ನೇ ಬಳಸಿಕೊಂಡು ಬೆಂಗಾವಲು ಸಿಬ್ಬಂದಿ ಚಂದ್ರಾನಾಯ್ಕ ಎಂಬುವರಿಗೆ ಹೊಡೆದು ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಪೊಲೀಸರು ಆತ್ಮರಕ್ಷಣೆಗಾಗಿ ಪಿಸ್ತೂಲಿನಿಂದ ಭರತನಿಗೆ ಗುಂಡು  ಹಾರಿಸಿದರು. ಇದರಿಂದ ಆರೋಪಿಯ ಬಲಗಾಲಿಗೆ ಪೆಟ್ಟು ಬಿದ್ದಿದ್ದು ಆತ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಎಸ್ಪಿ ಶಾಂತರಾಜ್ ತಿಳಿಸಿದ್ದಾರೆ.
ಮತ್ತೊರ್ವ ಆರೋಪಿ ಶೃತಿಯಾಗಿದ್ದು, ಇವರನ್ನು ಕೂಡ ಬಂಧಿಸಲಾಗಿದೆ. ಭರತ್ ಮತ್ತು ಶೃತಿ ಪ್ರೇಮಿಗಳಾಗಿದ್ದರು. ಆರೋಪಿ ಪ್ರವೀಣ್ ಎಂಬಾತ ಶೃತಿಯ ಕೆಲವು ಖಾಸಗಿ ವಿಡಿಯೊಗಳನ್ನು ಮೊಬೈಲ್‌ನಲ್ಲಿ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡಿ ಶೃತಿಗೆ ಕಿರುಕುಳ ನೀಡುತ್ತಿದ್ದ. ಶೃತಿ ತನ್ನ ಪ್ರೇಮಿ ಭರತನಿಗೆ ತಿಳಿಸಿದ್ದು,  ಇದರಿಂದ ಕ್ರೋಧಗೊಂಡ ಭರತ್ ಮತ್ತು ಶೃತಿ ಇಬ್ಬರೂ ಪ್ರವೀಣನನ್ನು ಕೊಲೆ ಮಾಡಲು ಸಂಚು ರೂಪಿಸಿ ಪ್ರವೀಣನ ಮನೆಗೆ ಅ.೧೦ ರಂದು ಹೋಗಿ ಪ್ರವೀಣ ಮತ್ತು ಅವರ ತಾಯಿ ಬಂಗಾರಮ್ಮ ಇಬ್ಬರನ್ನು ಕೊಲೆ ಮಾಡಿರುತ್ತಾರೆ. ಅಷ್ಟೇ ಅಲ್ಲದೇ ಆ ಸಂದರ್ಭದಲ್ಲಿ ಇದ್ದ ಪ್ರವೀಣನ ಪತ್ನಿಯ ಮೇಲೆ ಅತ್ಯಾಚಾರ ಮಾಡಿ 4ಸಾವಿರ ರೂ.ಹಣವನ್ನು ಕೂಡ ತೆಗೆದುಕೊಂಡು ಆರೋಪಿಗಳು ಪರಾರಿಯಾಗಿದ್ದರೂ ಎಸ್ಪಿಯವರು ವಿವರಣೆ ನೀಡಿದರು.
ಕೊಲೆ ಪ್ರಕರಣ ಬೆನ್ನು ಹತ್ತಿದ ವಿಶೇಷ ತಂಡದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಮೊಬೈಲ್, ಚಾಕು, ರಕ್ತಸಿಕ್ತ ಬಟ್ಟೆ ಮುಂತಾದವುಗಳನ್ನು ಪೊಲೀಸರು ಈಗಾಗಲೇ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದ ಭರತ ಈಗ ಗುಂಡೇಟು ತಗುಲಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನಿಂದ ಮತ್ತಷ್ಟು ವಿವರಣೆ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಡಿವೈಎಸ್ಪಿಗಳಾದ ವಿನಾಯಕಶೆಟಗರಿ, ಇನ್ಸ್‌ಪೆಕ್ಟರ್ ಕುಮಾರಸ್ವಾಮಿ, ಅಭಯಪ್ರಕಾಶ್, ಉಮೇಶ್, ಭರತ್‌ಕುಮಾರ್ ಜೊತೆಗೆ ಸುಜಾತ, ಕಿರಣ್‌ಮೊರೆ, ಸಂದೀಪ್, ವಸಂತ್, ಚಂದ್ರಾನಾಯ್ಕ, ಹಾಲಪ್ಪ, ಫಾರೂಕ್, ಪರಶುರಾಮ್, ಇಂದ್ರೇಶ್, ಗುರುರಾಜ್, ವಿಜಯ್ ಭಾಗವಹಿಸಿದ್ದರು. ಈ ತಂಡಕ್ಕೆ ಇಲಾಖೆ ಅಭಿನಂದಿಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ಟಿ.ಹೆಚ್. ಶೇಖರ್, ಸಾಗರ ಡಿವೈಎಸ್ಪಿ ವಿನಾಯಕ ಹಾಗೂ ಇತರ ಅಧಿಕಾರಿಗಳು ಇದ್ದರು.

Exit mobile version