Site icon TUNGATARANGA

ಹಸಿರುಮಕ್ಕಿ ಸೇತುವೆ ವೀಕ್ಷಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ ; ಇನ್ನೊಂದು ವರ್ಷದೊಳಗೆ ಕಾಮಗಾರಿ ಅಂತ್ಯ

ಹೊಸನಗರ: 2024ರ ಜೂನ್ ಅಂತ್ಯದೊಳಗಾಗಿ ಹಸಿರುಮಕ್ಕಿ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಸೋಮವಾರ ಹಸಿರುಮಕ್ಕಿ ಸೇತುವೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಳುಗಡೆಯಿಂದ ನಲುಗಿರುವ ಈ ಭಾಗದಜನತೆಗೆ ಸಂಪರ್ಕ ಸಮಸ್ಯೆ ದಶಕಗಳಿಂದಲೂ ಇದೆ. ಇದನ್ನು ಮನಗಂಡು ಜನರ ಒತ್ತಾಸೆಯಂತೆ ಹಿರಿಯರಾದ ಕಾಗೋಡು ತಿಮ್ಮಪ್ಪ ಅವರು ಸಚಿವರಾಗಿದ್ದ ವೇಳೆ 116 ಕೋಟಿ ರೂ. ಅನುದಾನದಲ್ಲಿ ಸೇತುವೆ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿದ್ದರು.

ಆದರೆಅವರಅವಧಿ ಮುಗಿದ ಬಳಿಕ ಹಿಂದಿನ ಶಾಸಕರುಕಾಮಗಾರಿಯ ಪ್ರಗತಿಗೆ ಆಸಕ್ತಿ ತೋರಲಿಲ್ಲ. ಈವರೆಗೆ ಕೇವಲ 53 ಕೋಟಿರೂ. ವೆಚ್ಚದಕಾಮಗಾರಿಯಷ್ಟೇ ಮುಕ್ತಾಯಗೊಂಡಿದೆ. ಆದರೆ ಈಗ ಒಂದು ವಾರದ ಈಚೆಗೆ ಕಾಮಗಾರಿಗೆ ಮರು ಚಾಲನೆ ದೊರೆತಿದೆ. ನೂತನತಂತ್ರಜ್ಞಾನ ಬಳಸಿ ಪಿಲ್ಲರ್‌ಗಳನ್ನು ನಿರ್ಮಾಣ ಮಾಡಲಾಗುತಿದೆ. ಇನ್ನೊಂದು ವರ್ಷದಲ್ಲಿಕಾಮಗಾರಿ ಮುಕ್ತಾಯಗೊಂಡು ಸೇತುವೆ ಸಂಚಾರಕ್ಕೆ ಮುಕ್ತವಾಗುವ ವಿಶ್ವಸವಿದೆ ಎಂದರು.

ನಮಗೆ ಡಬಲ್ ಎಂಜಿನ್ ಸರಕಾರದ ಅವಶ್ಯತೆಯೇ ಇಲ್ಲ, ನಮ್ಮದು ಸಿಂಗಲ್ ಎಂಜಿನ್ ಸರಕಾರ ಆದರೂ, ಅದು ಗಟ್ಟಿಮುಟ್ಟಾಗಿದೆ. ರಾಜ್ಯದಲ್ಲಿಜನಪರ ಆಡಳಿತ ನೀಡುವ ಮೂಲಕ ಬದ್ಧತೆ ತೋರುತ್ತೇವೆ ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಿದೆ. ಜನಪರ ಕಾಳಜಿಯ ಹಲವು ಕೆಲಸಗಳು ಬಿಜೆಪಿ ಸರಕಾರದ ಅವಧಿಯಲ್ಲಿ ನೆನೆಗುದಿಗೆ ಬಿದ್ದಿವೆ. ಜನರ ಶಾಪದ ಫಲವಾಗಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಈಗ ಶಾಪ ವಿಮೋಚನೆ ಆಗಿದೆ. ನೂತನ ಸರ್ಕಾರದ ಮೇಲೆ ಜನತೆ ಇಟ್ಟಿರುವ ಭರವಸೆಗಳು ಹುಸಿಯಾಗದು ಎಂದರು.

.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಐದು ವರ್ಷ ಏನೂ ಮಾಡದೇ ಸುಮ್ಮನಿದ್ದ ಹಿಂದಿನ ಶಾಸಕರು ಚುನಾವಣೆ ಸಮೀಪಿಸುತ್ತಿದ್ದಂತೆ, ಗುತ್ತಿಗೆದಾರನ ಬಳಿ ಸೇತುವೆ ನಿರ್ಮಾಣ ಮಾಡುವ ಕೌಶಲ್ಯವೇ ಇಲ್ಲ ಎಂದು ಸಬೂಬು ಹೇಳಿದರು.

ಕೇವಲ ಸಿಗಂದೂರು ಸೇತುವೆ ನಿರ್ಮಾಣಕ್ಕೆ ಮಾತ್ರ ಮಹತ್ವ ನೀಡಿದರು. ಅಪ್ಪಿತಪ್ಪಿ ಸಹಾ ಈ ಭಾಗಕ್ಕೆ ಒಮ್ಮೆಯೂ ಭೇಟಿ ನೀಡಲಿಲ್ಲ. ಒಂದು ವೇಳೆ ತಾಂತ್ರಿಕ ಸಮಸ್ಯೆ ಇದ್ದರೆ, ಅದನ್ನು ಸರಿಪಡಿಸಿಕೊಂಡು ಕಾಮಗಾರಿ ಪೂರ್ಣಗೊಳಿಸಬಹುದಾಗಿತ್ತು. ಮುಳುಗಡೆಯಿಂದ ಸಮಸ್ಯೆಯಲ್ಲಿ ನಲುಗಿದ ಈ ಭಾಗದ ಜನರ ಕಷ್ಟ ಅರ್ಥವಾಗಲಿಲ್ಲ. ಈಗ ನೂತನ ತಂತ್ರಜ್ಞಾನದ ಯಂತ್ರಗಳನ್ನು ತರಿಸಲಾಗಿದ್ದು, ಅದೇ ಗುತ್ತಿಗೆದಾರ ಕಾಮಗಾರಿ ಮರುಚಾಲನೆ ಮಾಡಿದ್ದಾನೆ. ಮಾಡಬೇಕೆನ್ನುವ ಮನಸ್ಸಿದ್ದರೇ ಏನನ್ನಾದರೂ ಮಾಡಬಹುದು ಎಂದು ಮಾಜಿ ಶಾಸಕ ಹರತಾಳು ಹಾಲಪ್ಪ ಅವರ ಹೆಸರು ಹೇಳದೆ ಪರೋಕ್ಷವಾಗಿ ಟೀಕಿಸಿದರು.

ಗೋಷ್ಠಿಯಲ್ಲಿ ಪ್ರಮುಖರಾದ ಬಿ.ಜಿ.ನಾಗರಾಜ್, ಎರಗಿ ಉಮೇಶ್, ಎ.ಓ.ರಾಮಚಂದ್ರರಾವ್, ವಿಶ್ವನಾಥ್ ನಾಗೋಡಿ, ಚಂದಯ್ಯ ಜೈನ್, ಸುರೇಶ್, ರವೀಶ್ ನಿಟ್ಟೂರು, ಅಶ್ವಿನಿಕುಮಾರ್, ನಾಸೀರ್, ಕೆಆರ್‌ಡಿಸಿಎಲ್ ಎಇಇ ಲಿಂಗರಾಜ್ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಹಾಜರಿದ್ದರು.

Exit mobile version