ಶಿವಮೊಗ್ಗ: ನಿರುದ್ಯೋಗಿ ಯುವಕರಿಗೆ ಕೆಲವೇ ದಿನಗಳಲ್ಲಿ ನಿರುದ್ಯೋಗಿ ಭತ್ಯೆ ನೀಡುವ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಯುವ ಕಾಂಗ್ರೆಸ್‍ನ ರಾಜ್ಯ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಅವರು ಇಂದು ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತನುದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ಗ್ಯಾರಂಟಿಯಂತೆ ಕೆಲವೇ ದಿನಗಳಲ್ಲಿ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡಲಾಗುವುದು. ಇದರಿಂದ ಯುವ ಸಮೂಹ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗಲಿದೆ ಎಂದರು.
ಕೇಂದ್ರ ಸರ್ಕಾರದ ದುರಾಡಳಿತ ನೋಡಿ, ಯುವಕರು ಕಾಂಗ್ರೆಸ್ ಪರ ವಾಲುತ್ತಿದ್ದಾರೆ. ಇದು ಹರ್ಷದ ಸಂಗತಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಯುವಕರು ಕಾಂಗ್ರೆಸ್ ಪರವಾಗಿ ಸಂಘಟಿತರಾಗಲಿದ್ದಾರೆ. ಈ ನಿಟ್ಟಿನಲ್ಲಿ ಎನ್.ಎಸ್.ಯು.ಐ. ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಎಂದಿಗೂ ಜನಪರ, ಬಡವರ ಪರ ಸರ್ಕಾರ, ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಜನರಿಗೆ ನೀಡಿದ್ದ ಎಲ್ಲಾ ಭರವಸೆಗಳನ್ನೂ ಈಡೇರಿಸಲಿದೆ. ರಾಜ್ಯದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ವಿಶ್ವಾಸವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ವಿಜಯ, ಗ್ರಾಮಾಂತರ ಅಧ್ಯಕ್ಷ ಹರ್ಷಿತ್, ಜಿಲ್ಲಾ ಪ್ರಮುಖರಾದ ಎಸ್.ಪಿ. ದಿನೇಶ್, ವಿಶ್ವನಾಥ್ ಕಾಶಿ, ಸೌತ್ ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷ ಕಲೀಮ್ ಪಾಷ, ಯುವ ಕಾಂಗ್ರೆಸ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್, ಯುವ ಮುಖಂಡ ಮಧುಸೂದನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಮೃಣಾಲ್ ಹೆಬ್ಬಾಳ್ಕರ್ ಅವರನ್ನು ಜಿಲ್ಲಾ ಎನ್.ಎಸ್.ಯು.ಐ.ನಿಂದ ಸನ್ಮಾನಿಸಿಸಲಾಯಿತು.
ಶಿವಮೊಗ್ಗ : ವೈನ್ ಉದ್ಯಮದಲ್ಲಿ ಮಹಿಳಾ ಉದ್ಯಮಿಯಾಗಿ ಇಡೀ ರಾಜ್ಯದಲ್ಲಿ ನಾನೇ ಪ್ರಥಮವಾಗಿದ್ದು, ಈ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಖ್ಯಾತ ಉದ್ಯಮಿ ಸುಷ್ಮಾ ಸಂಜಯ್ ಹೇಳಿದರು. ಶಿವಮೊಗ್ಗ ಭಾವಸಾರ ವಿಜನ್ ಇಂಡಿಯಾ ಸಂಸ್ಥೆವತಿಯಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ವೈನ್ ಉದ್ಯಮ ನಡೆಸುವುದು ಸುಲಭದ ಮಾತಲ್ಲ. ಅದರಲ್ಲೂ ಗ್ರಾಮೀಣ ಭಾಗದಲ್ಲಿದ್ದುಕೊಂಡು, ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಹ ಉದ್ಯಮ ನಡೆಸುವುದು ತೀರ ಕಷ್ಟಕರ. ಆದರೂ ಛಲ ಬಿಡದೇ ನಾನು ಈ ಸಂಸ್ಥೆ ನಿರ್ವಹಿಸುತ್ತಿದ್ದೆನೆ. ಇದಕ್ಕೆ ಅಬಕಾರಿ ಇಲಾಖಾಧಿಕಾರಿಗಳ ಸಹಕಾರ ಮರೆಯುವ ಹಾಗೆ ಇಲ್ಲ ಎಂದು ಅವರು ಹೇಳಿದರು.
ಪ್ರಸ್ತುತ ಹಲವಾರು ಯುವ ಉದ್ಯೋಗಕಾಂಕ್ಷಿಗಳು, ತಮಗೆ ಕೆಲಸ ಸಿಗಬೇಕೆಂಬ ನಿಟ್ಟಿನಲ್ಲಿ ಹಲವಾರು ವರ್ಷಗಳ ಕಾಲ ಕಾಲಹರಣ ಮಾಡಿ ನಿರಾಸೆ ಹೊಂದುತ್ತಾರೆ. ಅದರ ಬದಲು, ತಮ್ಮದೇ ಸ್ವಂತ ಉದ್ಯಮವನ್ನು, ತಮಗೆ ಇಷ್ಟವಾದ ಕ್ಷೇತ್ರದಲ್ಲಿ ಆಯ್ಕೆ ಮಾಡಿಕೊಂಡು ನಡೆಸಿಕೊಂಡು ಹೋಗಬೇಕು. ಆಗ ಮಾತ್ರ ಸಾಧಿಸಲು ಸಾಧ್ಯವಾಗುತ್ತದೆ ಎಂದು ಉದ್ಯೋಗಕಾಂಕ್ಷಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವೈನ್ ಉದ್ಯಮದ ಕುರಿತಂತೆ ಸವಿಸ್ತಾರವಾಗಿ ಮಾತನಾಡಿದ ಅವರು, ಬೇರೆ ಉತ್ಪನ್ನಗಳಿಗಿಂತ ತಮ್ಮ ಸಂಸ್ಥೆಯ ಉತ್ಪನ್ನ ಎಷ್ಟು ಭಿನ್ನ ಎಂದು ಮನವರಿಕೆ ಮಾಡಿಕೊಟ್ಟರು. ಅಲ್ಲದೇ, ಅನೇಕ ಉದ್ಯೋಗಕಾಂಕ್ಷಿಗಳಿಗೆ ತಮ್ಮ ಸಂಸ್ಥೆಯಲ್ಲಿ ಕೆಲಸ ನೀಡಿದ ತೃಪ್ತಿ ತಮಗಿದ್ದು, ಯುವ ಪೀಳಿಗೆ ಉದ್ಯೋಗ ಹುಡುಕುವ ಬದಲು ಉದ್ಯೋಗ ಸೃಷ್ಟಿ ಮಾಡಿಕೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಮೊಗ್ಗದ ಪರಿಸರ ಪ್ರೇಮಿ, ಕೇವಲ ಪಕ್ಷಿಗಳಿಗಾಗಿಯೇ ತಮ್ಮ 1 ಎಕರೆ ಪ್ರದೇಶದಲ್ಲಿ ಈಶ್ವರವನ ನಿರ್ಮಾಣ ಮಾಡಿರುವ ನವ್ಯಶ್ರೀ ನಾಗೇಶ್ ಅವರಿಗೆ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆ ಕಾರ್ಯದರ್ಶಿ ಸಚಿನ್ ಬೇದ್ರೆ, ನಿರ್ದೇಶಕರಾದ ಸ್ವಪ್ನಾ ಹರೀಶ್, ಮಮತಾ ಕಮಲಾಕರ್, ಸ್ವಪ್ನ ಪ್ರಭಾಕರ್, ವಾಣಿ ತೇಲ್ಕರ್, ವಿನಯ್ ಕುಂಟೆ, ಕೀರ್ತಿ ಕಿರಣ್, ದಿನೇಶ್ ಕುಂಠೆ, ಕಮಲಾಕರ್, ಕಿರಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷ ಪ್ರಭಾಕರ್ ವಂಡ್ಕರ್ ವಹಿಸಿದ್ದರು.