Site icon TUNGATARANGA

ಕೊನೆಗೂ ಶಿವಮೊಗ್ಗ ಜಿಲ್ಲೆಗೆ ಸಚಿವ ಪಟ್ಟ | ಮಧು ಬಂಗಾರಪ್ಪ ಶಿವಮೊಗ್ಗದ ಹೀರೊ

ಶಿವಮೊಗ್ಗ: ಕೊನೆಗೂ ಶಿವಮೊಗ್ಗ ಜಿಲ್ಲೆಗೆ ಸಚಿವ ಪಟ್ಟ ಸಿಕ್ಕಂತಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮೂವರು ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗಿದ್ದರು. ಅದರಲ್ಲಿ ಅದೃಷ್ಟ ಮಧು ಬಂಗಾರಪ್ಪ ಅವರದ್ದಾಗಿದೆ.


ಹಾಗೆ ನೋಡಿದರೆ ಕಾಂಗ್ರೆಸ್ ಪಕ್ಷದಿಂದ ನಾಲ್ಕು ಬಾರಿ ಗೆದ್ದಿರುವ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಅವರು ಹಿರಿಯರಿದ್ದರು. ಮತ್ತು ಮಂತ್ರಿ ಪದವಿ ಸಿಕ್ಕೆ ಸಿಗುತ್ತದೆ ಎಂಬ ಆಶಾಭಾವನೆ ಹೊಂದಿದ್ದರು. ಇದಕ್ಕಾಗಿ ಒಂದು ರೀತಿಯಲ್ಲಿ ಲಾಬಿ ಕೂಡ ನಡೆದಿತ್ತು. ಆದರೆ ಅದೇಕೋ ಅವರಿಗೆ ಆ ಪಟ್ಟ ಸಿಕ್ಕಿಲ್ಲ. ಬಹುಶಃ ಅವರ ಆರೋಗ್ಯದ ನೆಪ ಇಟ್ಟುಕೊಂಡು ಕೊಟ್ಟಿರಲಿಕ್ಕಿಲ್ಲ ಎನಿಸುತ್ತದೆ.


ಹಾಗೆಯೇ ಸಾಗರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬೇಳೂರು ಗೋಪಾಲಕೃಷ್ಣ ಕೂಡ ಸಚಿವ ಆಕಾಂಕ್ಷಿಯಾಗಿದ್ದರು. ಬಿಜೆಪಿ ಯಿಂದ ಬಂದು ಕಾಂಗ್ರೆಸ್ ಸೇರಿ ಒಂದು ರೀತಿಯ ಚಲನಶೀಲತೆಯನ್ನು ಅವರು ಮೂಡಿಸಿದ್ದರು. ವಿರೋಧ ಪಕ್ಷಗಳ ನಾಯಕರನ್ನು ತಮ್ಮದೇ ಆದ ಧಾಟಿಯಲ್ಲಿ ಟೀಕಿಸುತ್ತಿದ್ದರು. ಅವರ ಓಡಾಟ, ಮಾತು ಪಕ್ಷ ಕಟ್ಟುವ ರೀತಿ ಕಂಡು ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಿತ್ತು. ಬಿಜೆಪಿ ಪ್ರಬಲ ಅಭ್ಯರ್ಥಿಯಾಗಿದ್ದ ಹರತಾಳು ಹಾಲಪ್ಪ ಅವರನ್ನು ಸೋಲಿಸಿದ್ದರು. ಹಾಗಾಗಿ ಅವರಿಗೆ ಸಚಿವ ಪಟ್ಟ ಸಿಗಬಹುದು ಎನ್ನಲಾಗಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ ಬೇಳೂರು ಅವರನ್ನು ಕೈಬಿಟ್ಟಿ ಮಧು ಬಂಗಾರಪ್ಪನವರಿಗೆ ಅವಕಾಶ ನೀಡಿದೆ. ಬಹುಶಃ ಈ ಇಬ್ಬರಲ್ಲೂ ಅಂತಹ ಅಸಮಾಧಾನ ಇದ್ದಂತೆ ಕಾಣುವುದಿಲ್ಲ ಮತ್ತು ಪಕ್ಷದಲ್ಲಿ ಇವರಿಗೆ ಮುಂದೆ ಪ್ರಾತಿನಿಧ್ಯ ಕೊಡಬಹುದು ಎನ್ನಲಾಗುತ್ತಿದೆ.


ಮಧು ಬಂಗಾರಪ್ಪ ಜೆಡಿಎಸ್‌ನಿಂದ ಬಂದಿದ್ದರೂ ಕೂಡ ಕಡಿಮೆ ಅವಧಿಯಲ್ಲಿಯೇ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಹೈಕಮಾಂಡ್ ಸಂಪರ್ಕ ಇವರಿಗೆ ಸದಾ ಇತ್ತು. ಮತ್ತು ತಮ್ಮ ಸಹೋದರ ಕುಮಾರ್ ಬಂಗಾರಪ್ಪ ಅವರನ್ನು ಅತ್ಯಧಿಕ ಮತಗಳಿಂದ ಸೋಲಿಸಿದ್ದರು. ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿದ್ದ ಮಧು ಬಂಗಾರಪ್ಪ ಇಡೀ ರಾಜ್ಯದಲ್ಲಿ ಓಡಾಟ ನಡೆಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎನ್ನುವುದರಲ್ಲಿ ಅತಿಶಯೋಕ್ತಿ ಏನಿಲ್ಲ. ಹಾಗಾಗಿ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. ಇದು ಶಿವಮೊಗ್ಗ ಜಿಲ್ಲೆಯ ಹೆಮ್ಮೆಯೂ ಆಗಿದೆ. ಮತ್ತು ಸ್ವಾಭಾವಿಕವಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗುವ ಎಲ್ಲಾ ಸಾಧ್ಯತೆಗಳೂ ಇವೆ.
ಮಧು ಬಂಗಾರಪ್ಪ ಎಂದೇ ಖ್ಯಾತರಾಗಿರುವ ಸಾರೆಕೊಪ್ಪ ಮಧು ಬಂಗಾರಪ್ಪ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಅವರ ಪುತ್ರ. ಅವರು ಪ್ರಮುಖ ಸಮಾಜ ಸೇವಕ ಮತ್ತು ರಾಜಕಾರಣಿ, ಶಿಕ್ಷಣ ಮತ್ತು ಮನರಂಜನಾ ಉದ್ಯಮಕ್ಕೆ ಅವರ ಕೊಡುಗೆ ಗಮನಾರ್ಹವಾಗಿದೆ.


ಮಧು ಬಂಗಾರಪ್ಪ ಅವರು ಶರಾವತಿ ಎಜುಕೇಶನ್ ಟ್ರಸ್ಟ್ ಮತ್ತು ಮಲ್ನಾಡ್ ಶಾಲೆಗಳ ಅಧ್ಯಕ್ಷರಾಗಿದ್ದಾರೆ, ಈ ಸಂಸ್ಥೆಗಳು ಬಹಳ? ವಿದ್ಯಾರ್ಥಿಗಳ ಕನಸುಗಳನ್ನು ಸಾಕಾರಗೊಳಿಸಲು ಆಧಾರಸ್ತಂಭಗಳಾಗಿವೆ. ಮಧು ಬಂಗಾರಪ್ಪ ಅವರು ತಮ್ಮ ಸಾಮಾಜಿಕ ಕಾರ್ಯದ ಮೂಲಕ ಸಾರೆಕೊಪ್ಪ ಬಂಗಾರಪ್ಪನವರ ಪರಂಪರೆಯನ್ನು ಹೊತ್ತಿದ್ದಾರೆ.


ಆಕಾಶ್ ಆಡಿಯೋ ಕನ್ನಡ ಚಿತ್ರರಂಗದ ಹೆಮ್ಮೆ. ಮಧು ಬಂಗಾರಪ್ಪ ಅವರು ಈ ಸಂಸ್ಥೆಯನ್ನು ಪೋಷಿಸಿದ್ದಾರೆ, ಇದು ಕನ್ನಡ ಚಲನಚಿತ್ರೋದ್ಯಮಕ್ಕೆ ಸಾಕ? ಪ್ರತಿಭೆಗಳನ್ನು ತಂದಿದೆ, ಅವರು ಹಲವಾರು ಚಲನಚಿತ್ರಗಳನ್ನು ನಟಿಸಿದ್ದಾರೆ ಮತ್ತು ನಿರ್ಮಿಸಿದ್ದಾರೆ ಅದರಲ್ಲಿ “ಕಲ್ಲರಳಿ ಹೂವಾಗಿ’ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸಹ ಗಳಿಸಿದ್ದಾರೆ.


ಮಧು ಬಂಗಾರಪ್ಪ ಅವರು ಜನತಾ ದಳದಿಂದ ಕಾಂಗ್ರೆಸ್‌ಗೆ ಸೇರಿದರು. ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಗೌರವ ಸದಸ್ಯರೂ ಆಗಿದ್ದಾರೆ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷರಾಗಿದ್ದಾರೆ. ಅವರು ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷರಾಗಿದ್ದರು. ಕರ್ನಾಟಕ ವಿಧಾನಸಭಾ ಚುನಾವಣೆ ೨೦೨೩ರಲ್ಲಿ ಸೊರಬ ಕ್ಷೇತ್ರದಲ್ಲಿ ಕಾಂಗ್ರೆಸ್ ಅನ್ನು ಪ್ರತಿನಿಧಿಸುವ ಐತಿಹಾಸಿಕ ವಿಜಯದೊಂದಿಗೆ ವಿಜಯಶಾಲಿಯಾಗಿದ್ದರು.
ಇದೀಗ ಅವರು ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮತ್ತು ಸಚಿವರಾಗಿದ್ದಾರೆ. ಕ್ಷೇತ್ರದ ಜನರ ಆಶಯಗಳಿಗೆ ಅವರು ಸ್ಪಂದಿಸುವ ಎಲ್ಲಾ ನಿರೀಕ್ಷೆಗಳಿವೆ. ಜಿಲ್ಲೆಗಲ್ಲದೆ ಒಟ್ಟಾರೆ ರಾಜ್ಯದ ಅಭಿವೃದ್ಧಿಗೆ ಅವರ ಕೊಡುವೆ ಅಪಾರವಾಗಿದೆ. ಯಾವುದೇ ಖಾತೆ ಕೊಟ್ಟರೂ ಅವರು ನಿಭಾಯಿಸಬಲ್ಲವರಾಗಿದ್ದಾರೆ. ಅವರ ಮಹತ್ವಾಕಾಂಕ್ಷೆಗಳು ಯಾವಾಗಲೂ ಸಮಾಜದ ವಿವಿಧ ಕ್ಷೇತ್ರಗಳ ಅಭಿವೃದ್ಧಿಯತ್ತ ಇರುತ್ತದೆ.

Exit mobile version