Site icon TUNGATARANGA

ನಾನು ಬಂಗಾರಪ್ಪ ಅವರ ಗರಡಿಯಲ್ಲಿ ಬೆಳೆದವನು ಎಲ್ಲ ಜಾತಿಧರ್ಮವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ದಿ ಮಾಡುತ್ತೇನೆ; ಶಾಸಕ ಗೋಪಾಲಕೃಷ್ಣ ಬೇಳೂರು

ಸಾಗರ : ನಾನು ಬಂಗಾರಪ್ಪ ಅವರ ಗರಡಿಯಲ್ಲಿ ಬೆಳೆದವನು. ಅವರ ತತ್ವಾದರ್ಶಗಳನ್ನು ನಾನು ಮೈಗೂಡಿಸಿಕೊಂಡಿದ್ದು, ಎಲ್ಲ ಜಾತಿಧರ್ಮವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ದಿ ಮಾಡುತ್ತೇನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.


ಇಲ್ಲಿನ ಗ್ರೀನ್ ಎಂಬೆಸ್ಸಿ ಸಭಾಂಗಣದಲ್ಲಿ ಶುಕ್ರವಾರ ಅಂಜುಮನ್-ಎ ಸಾಗರ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು.


ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರಲು, ಸಾಗರ ಕ್ಷೇತ್ರದಲ್ಲಿ ನಾನು ಅಭೂತಪೂರ್ವ ಗೆಲುವು ದಾಖಲಿಸುವಲ್ಲಿ ನಿಮ್ಮ ಪಾತ್ರ ಪ್ರಮುಖವಾಗಿದೆ. ಈ ಬಾರಿ ವಿಶೇಷವಾಗಿ ಸಾಗರದಲ್ಲಿ ಎಲ್ಲ ಧರ್ಮದವರು ನನ್ನನ್ನು ಬೆಂಬಲಿಸಿದ್ದಾರೆ. ನೀವು ನೀಡಿದ ಬೆಂಬಲಕ್ಕೆ ತಕ್ಕಂತೆ ನಿಮ್ಮ ಸಮಸ್ಯೆಗೆ ನಾನು ಸ್ಪಂದಿಸುತ್ತೇನೆ. ನನಗೆ ಬಡವ ಶ್ರೀಮಂತ ಎಂಬ ಬೇಧಭಾವ ಇಲ್ಲ. ಮುಖಂಡರು, ಮಧ್ಯವರ್ತಿಗಳ ಸಹಾಯವಿಲ್ಲದೆ ನೇರವಾಗಿ ನನ್ನನ್ನು ಭೇಟಿಯಾಗಬಹುದು ಎಂದರು.


ಅಂಜುಮನ್-ಎ ಸಾಗರ ಸಂಸ್ಥೆಯ ಸೈಯದ್ ಇಕ್ಬಾಲ್ ಮಾತನಾಡಿ, ಕಳೆದ ಹತ್ತು ವರ್ಷಗಳ ನಂತರ ಕ್ಷೇತ್ರದಲ್ಲಿ ಸಂಭ್ರಮದ ವಾತಾವರಣ ಮೂಡಿದೆ. ಈ ಬಾರಿ ಜನ ಬಲ ಮತ್ತು ಹಣ ಬಲದ ನಡುವೆ ತೀವೃ ಪೈಪೋಟಿ ನಡೆದು, ಅಂತಿಮವಾಗಿ ಅಪಾರ ಜನಬಲ ಹೊಂದಿದ್ದ ಬೇಳೂರು ಜಯಗಳಿಸಿದ್ದಾರೆ. ಇತಿಹಾಸದಲ್ಲಿ ಮೊದಲ ಬಾರಿಗೆ ಮುಸ್ಲೀಂ ಸಮುದಾಯ ಒಗ್ಗಟ್ಟಿನಿಂದ ಮತ ಚಲಾಯಿಸಿದೆ ಎಂದರು.


ವೇದಿಕೆಯಲ್ಲಿ ಅಕ್ಬರ್ ಖಾನ್, ಮನ್ಸೂರ್ ಆಲಿಖಾನ್, ಮಕ್ಬೂಲ್ ಅಹ್ಮದ್, ಮಹ್ಮದ್ ಖಾಸಿಂ, ಇಮಾಮ್ ಸಾಬ್, ಮಹ್ಮದ್ ಸಾಬ್, ನದೀಮ್, ಸಾಧಿಕ್ ಕಾರ್ಗಲ್, ಇಕ್ಬಾಲ್ ಸಾಬ್ ಇನ್ನಿತರರು ಹಾಜರಿದ್ದರು.

Exit mobile version