Site icon TUNGATARANGA

ಹೊಸನಗರ | ಗೋಮೂತ್ರ, ಸಗಣಿ ನೀರು ಮೈ ಮೇಲೆ ಸುರಿದುಕೊಂಡು ಗ್ರಾ.ಪಂ ಅಧ್ಯಕ್ಷನಿಂದ ವಿಭಿನ್ನ ಪ್ರತಿಭಟನೆ

ಹೊಸನಗರ: ಗೋಮೂತ್ರ, ಸಗಣಿ ನೀರು ಮೇಲೆ ಸುರಿದುಕೊಂಡು ಗ್ರಾಮ ಪಂಚಾಯಿತಿ ಅಧ್ಯಕ್ಷನೊಬ್ಬ ವಿನೂತನವಾಗಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ತಾಲೂಕಿನ ಮೂಡುಗೊಪ್ಪ (ನಗರ) ಗ್ರಾ.ಪಂ ಅಧ್ಯಕ್ಷ ಕರುಣಾಕರ ಶೆಟ್ಟಿ ಪ್ರತಿಭಟನೆ ನಡೆಸಿದ ಗ್ರಾಪಂ ಅಧ್ಯಕ್ಷನಾಗಿದ್ದು, ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಹಿನ್ನೆಲೆ ಟ್ಯಾಂಕರ್ ಗಳಲ್ಲಿ ಹಳ್ಳಿಹಳ್ಳಿಗೆ ನೀರು ಸೌಕರ್ಯಗಳನ್ನ ಒದಗಿಸಲಾಗುತ್ತಿದೆ. ಅದರ ಬಿಲ್ ಮಂಜೂರಾತಿ ಆಗುತ್ತಿಲ್ಲ ಎಂದು ಹೊಸನಗರ ತಾಲ್ಲೂಕು ಪಂಚಾಯಿತಿ ಮುಂಭಾಗ ಸಗಣಿ ಮತ್ತು ಗೋ ಮೂತ್ರದ ನೀರನ್ನು ಮೈಮೇಲೆ ಎರಚಿಕೊಂಡು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.

ಕೆಲ ತಿಂಗಳ ಹಿಂದೆ ತಾಲ್ಲೂಕು ಪಂಚಾಯಿತಿಯಲ್ಲಿ ಕಸಗುಡಿಸಿ ಪ್ರತಿಭಟಿಸಿದ್ದ ಗಮನ ಸೆಳೆದಿದ್ದ ಕರುಣಾಕರ ಶೆಟ್ಟಿ, ತಾಲ್ಲೂಕಿಗೆ ಕುಡಿಯುವ ನೀರಿನ ಸೌಕರ್ಯ ಒದಗಿಸಲು, ಹಣ ಮಂಜೂರು ಏಕೆ ಮಾಡುತ್ತಿಲ್ಲ ? ಹೊಸನಗರಕ್ಕೆ ಮಾತ್ರವೇ ಈ ನಿರ್ಲಕ್ಷ್ಯವೇಕೆ ? ಎಂದು ಪ್ರಶ್ನಿಸಿದ ಕರುಣಾಕರಶೆಟ್ಟಿ, ಜನರು ಕುಡಿಯುವ ನೀರು ಒದಗಿಸಿ ಎಂದು ಪ್ರಶ್ನಿಸುತ್ತಾರೆ. ಆದರೆ ಪಂಚಾಯಿತಿಗಳಿಗೆ ಹಣ ಒದಗಿಸುತ್ತಿಲ್ಲ. ನೀರಿನ ಟ್ಯಾಂಕರ್ಗಳ ಮೂಲಕ ನೀರು ಒದಗಿಸಲು ಸಾಧ್ಯವಾಗದೇ ಜನರಿಂದ ಮಾತು ಕೇಳಬೇಕಾದ ಸನ್ನಿವೇಶವಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಇನ್ನೂ ಕರುಣಾಕರ ಶೆಟ್ಟಿ ಪ್ರತಿಭಟನೆ ನಡೆಸಿದ ಬೆನ್ನಲ್ಲೆ ಉಪವಿಭಾಗೀಯ ಅಧಿಕಾರಿಯವರು ಹೊಸನಗರ ತಾಲ್ಲೂಕಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು 20 ಲಕ್ಷ ರೂಪಾಯಿ ಬಿಡುಗಡೆಯಾಗಿದೆ. ಈ ಪೈಕಿ 10 ಲಕ್ಷ ರೂಪಾಯಿ ಅನುದಾನ ಮೊದಲ ಕಂತಿನಲ್ಲಿ ಬಂದಿದೆ. ನಗರ ಪಂಚಾಯ್ತಿಯಿಂದಲೇ ಮೊದಲು ಹಣ ಬಿಡುಗಡೆ ಮಾಡಿ, ಕುಡಿಯುವ ನೀರಿನ ಸೌಕರ್ಯಕ್ಕೆ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಕರುಣಾಕರ ಶೆಟ್ಟಿ ಪ್ರತಿಭಟನೆಯನ್ನ ಕೈ ಬಿಟ್ಟಿದ್ದಾರೆ.

Exit mobile version