Site icon TUNGATARANGA

ಶಾಸಕ ಚೆನ್ನಬಸಪ್ಪ ಖಾಸಗಿ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ
ಅವ್ಯವಸ್ಥೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಸಖತ್ ಕ್ಲಾಸ್

ಖಸಗಿ ಬಸ್ ನಿಲ್ದಾಣದ ಅವ್ಯವಸ್ಥೆ ಬಗ್ಗೆ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಇಂದು ಪಾಲಿಕೆ ಮೇಯರ್ ಹಾಗೂ ಅಧಿಕಾರಿಗ ಳೊಂದಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಯಡಿಯೂರಪ್ಪನವರು ಮುಖ್ಯಮಂತ್ರಿಗ ಳಾಗಿದ್ದಾಗ ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದ ನಿರ್ಮಾಣಕ್ಕೆ ವಿಶೇಷ ಆಸಕ್ತಿ ವಹಿಸಿ ಸುಸಜ್ಜಿತ ಬಸ್ ನಿಲ್ದಾಣವನ್ನು ನಿರ್ಮಿಸಿದ್ದರು. ಆದರೆ ಈಗ ಆ ನಿಲ್ದಾಣದಲ್ಲಿ ಸಂಜೆಯಾದರೆ ಕುಡುಕರ ಕಾಟ ಮಿತಿ ಮೀರಿದ್ದು, ಬಹಿರಂಗವಾಗಿ ವೇಶ್ಯಾವಾಟಿಕೆ ನಡೆಯುತ್ತಿರುವುದರಿಂದ ಬಸ್ ನಿಲ್ದಾಣಕ್ಕೆ ಬರುವ ಮರ್ಯಾದಸ್ಥ ಹೆಣ್ಣು ಮಕ್ಕಳಿಗೆ ಮುಜುಗರವಾಗುತ್ತಿದ್ದು, ಬಸ್ ನಿಲ್ದಾಣದ ಒಳಗೆಯೇ ಮನಸ್ಸಿಗೆ ಬಂದಂತೆ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದು, ೧೦ಕ್ಕೂ ಹೆಚ್ಚು ತಿಂಡಿ ಗಾಡಿಗಳಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ.


ಸ್ವಚ್ಛತೆ ಎಂಬುದು ಇಲ್ಲಿ ಮರೀಚಿಕೆಯಾ ಗಿದ್ದು, ನಿಲ್ದಾಣದ ಒಳಗಿರುವ ಅಂಗಡಿಗಳು ಐದು ಅಡಿಗೂ ಹೆಚ್ಚು ಸ್ಥಳ ಅತಿಕ್ರಮಣ ಮಾಡಿ ತಮ್ಮ ವಹಿವಾಟು ಮಾಡುತ್ತಿದ್ದಾರೆ. ಸರಿಯಾದ ವಿದ್ಯುತ್ ವ್ಯವಸ್ಥೆ ಇಲ್ಲ. ಕುಡಿ ಯುವ ನೀರಂತೂ ಇಲ್ಲವೇ ಇಲ್ಲ. ನೂರಾರು ಬಸ್‌ಗಳು ಓಡಾಡುವ ಸಾವಿರಾರು ಪ್ರಯಾಣಿ ಕರು ಆಗಮಿಸುವ ಈ ಬಸ್ ನಿಲ್ದಾಣದಲ್ಲಿ ಒಂದೇ ಒಂದು ಕ್ಯಾಂಟೀನ್ ಇಲ್ಲ. ಶೌಚಾಲ ಯಕ್ಕೆ ಐದು ರೂ. ನಿಗದಿ ಮಾಡಿದ್ದರೂ ಹತ್ತು ರೂ.ಗಳನ್ನು ಬಲವಂತವಾಗಿ ಕಿತ್ತುಕೊಳ್ಳುತ್ತಾರೆ. ಮೂತ್ರ ವಿಸರ್ಜನೆಗೂ ೫ ರೂ. ಪಡೆಯುತ್ತಾರೆ ಎಂಬುದು ಪ್ರಯಾಣಿಕರ ಆರೋಪ. ಕೆಲ ಪ್ರಯಾಣಿಕರು ಬಸ್ ನಿಲ್ದಾಣದ ಆವರಣ ದಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದು, ಗಬ್ಬು ನಾತ ಬೀರುತ್ತಿದೆ.

ಬಸ್ ನಿಲ್ದಾಣದ ಒಳಗಿರುವ ಲಾಡ್ಜ್‌ನಲ್ಲಿ ಬೆಡ್ ಒಂದಕ್ಕೆ ೧೦೦ ರೂ. ಶುಲ್ಕ ಇದ್ದರೆ ಅದನ್ನು ನಿರ್ವಹಿಸು ವವರು ೧೫೦ರೂ. ಪಡೆಯುತ್ತಾರೆ. ಬಿಸಿ ನೀರಿಗೆ ೫೦ರೂ.ಗಳನ್ನು ಹೆಚ್ಚುವರಿಯಾಗಿ ಪಡೆಯುತ್ತಿದ್ದು, ಈ ಲಾಡ್ಜ್‌ನಲ್ಲಿ ಧೂಳು ಮತ್ತು ಕಸ ತುಂಬಿಕೊಂಡಿದೆ. ಇನ್ನೊಂದು ಬದಿಯಲ್ಲಿ ಕಟ್ಟಡ ನಿರ್ಮಾಣವಾಗುತ್ತಿದ್ದು, ವಾಹನ ಪಾರ್ಕಿಂಗ್ ಸ್ಥಳ ಸದ್ಯಕ್ಕೆ ಲಭ್ಯವಿಲ್ಲದ ಕಾರಣ ಅಂಗಡಿಗಳ ಮಾಲೀಕರು ಮತ್ತು ಪ್ರಯಾಣಿಕರ ವಾಹನಗಳು ನಿಲ್ದಾಣದೊಳಗೆ ಎಲ್ಲಿ ಬೇಕಾದಲ್ಲಿ ಪಾರ್ಕ್ ಮಾಡುತ್ತಿದ್ದಾರೆ. ಬಸ್ ಚಾಲಕರು ಮತ್ತು ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಕೂಡ ಕೆಲವರು ಗುಟ್ಕಾ ತಿಂದು ಎಲ್ಲೆಂದರಲ್ಲಿ ಉಗಿಯುತ್ತಿ ದ್ದಾರೆ. ಕರೆಂಟ್ ನಿಯಂತ್ರಕ ಬಾಕ್ಸ್‌ಗಳು ನೇತಾಡುತ್ತಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ.

ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಜಾಗದಲ್ಲಿ ಸ್ವಚ್ಛತೆಯೇ ಇಲ್ಲ. ವಾಸ್ತವವಾಗಿ ಇದರ ನಿರ್ವಹಣೆಯ ಹೊಣೆ ಹೊರಬೇಕಾಗಿದ್ದ ಟೆಂಡರುದಾರ ರವೀಂದ್ರ ಎನ್ನುವವರ ಪ್ರತಿ ತಿಂಗಳು ಪಾಲಿಕೆಗೆ ೯೭ಸಾವಿರ ಮಾತ್ರ ಬಾಡಿಗೆ ಕಟ್ಟುತ್ತಿದ್ದು, ಶೌಚಾಲಯ ಮತ್ತು ಸ್ಥಳೀಯ ಅಂಗಡಿ ಹಾಗೂ ಬಸ್ ಮಾಲೀಕರಿಂದ ಲಕ್ಷಾಂತರ ರೂ. ಕೀಳುತ್ತಿದ್ದಾನೆ ಎಂಬುದು ಸ್ಥಳೀಯರ ಆರೋಪ. ನಿರ್ವಹಣೆ ಎಂಬುದು ಕನಸಿನ ಮಾತಾಗಿದ್ದು, ಪಾಲಿಕೆಗೆ ಆದಾಯ ಕಡಿಮೆ ಇರುವುದರಿಂದ ನಿರ್ಲಕ್ಷ್ಯದ ಧೋರಣೆಯನ್ನು ಪಾಲಿಕೆ ಅಧಿಕಾರಿಗಳು ಅನುಸರಿಸುತ್ತಿದ್ದು, ಸಾರ್ವಜನಿಕರು ಇದರ ಫಲ ಅನುಭವಿಸಬೇಕಾಗಿದೆ.


ಈ ಎಲ್ಲಾ ಅಡಚಣೆಗಳನ್ನು ಗಮನಿಸಿದ ಶಾಸಕರು ಇಂದು ಖಾಸಗಿ ಬಸ್ ನಿಲ್ದಾಣದ ಪೂರ್ಣ ಪರಿಶೀಲನೆ ಮಾಡಿ ಎಲ್ಲಾ ಲೋಪದೋಷಗಳ ಬಗ್ಗೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡು ಕೂಡಲೇ ಸರಿಪಡಿಸುವಂತೆ ಸೂಚನೆ ನೀಡಿದರಲ್ಲದೆ, ಸ್ವತಃ ಎಲ್ಲಾ ಅಂಗಡಿಗಳಿಗೂ ಎಚ್ಚರಿಕೆ ನೀಡಿ ಯಾವುದೇ ಕಾರಣಕ್ಕೂ ಅಂಗಡಿಯ ಹೊರಗೆ ವಸ್ತುಗಳನ್ನು ಇಡಬಾರದು ಮತ್ತು ಸ್ವಚ್ಛತೆ ಕಾಪಾಡಬೇಕೆಂದು ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಮೇಯರ್ ಶಿಕುಮಾರ್, ಉಪಮೇಯರ್ ಲಕ್ಷ್ಮಿಶಂಕರ್ ನಾಯಕ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಆಯುಕ್ತ ಮಾಯಣ್ಣ ಗೌಡ, ಸ್ಥಳೀಯ ಕಾರ್ಪೊರೇಟರ್ ವಿಶ್ವನಾಥ್, ದೊಡ್ಡಪೇಠೆ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version