Site icon TUNGATARANGA

ಸೋಲುಗಳಿಂದ ಕುಗ್ಗದಿರಲು ಸಾಹಿತ್ಯದ ಮೊರೆಹೋಗಿ : ಡಾ.ಎಸ್.ಟಿ.ಅರವಿಂದ

ಶಿವಮೊಗ್ಗ : ಬದುಕಿನ ಸೋಲು ಅವಮಾನಗಳಿಂದ ಕುಗ್ಗದಿರಲು ಮನೋವಿಜ್ಞಾನ ಮತ್ತು ಸಾಹಿತ್ಯದ ಮೊರೆಹೋಗಿ ಎಂದು ಖ್ಯಾತ ಮನಃಶಾಸ್ತ್ರಜ್ಞ ಡಾ.ಎಸ್.ಟಿ.ಅರವಿಂದ ಅಭಿಪ್ರಾಯಪಟ್ಟರು.

ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮೈತ್ರಿ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಿದ್ದ ಡಾ. ಕೆ.ಎ. ಅಶೋಕ ಪೈ ಅವರು ನೀಡಿರುವ ಕಟೀಲು ಅಪ್ಪು ಪೈ ಮತ್ತು ವಿನೋದಿನಿ ಪೈ ಸ್ಮಾರಕ ದತ್ತಿಯ ಆಶಯದಂತೆ ಮನೋವಿಜ್ಞಾನ ಮತ್ತು ಸಾಹಿತ್ಯ ಕುರಿತು ಮಾತನಾಡಿದರು.

ಕನಸಿಲ್ಲದೆ ಜೀವನವಿಲ್ಲ. ನಾವು ಜೀವನದಲ್ಲಿ ಪಡೆದುಕೊಳ್ಳಲು ಆಗದ್ದನ್ನು ಕನಸಿನಲ್ಲಿ ಕಾಣುತ್ತೇವೆ. ಜೀವನದಲ್ಲಿ ಸೋಲು, ಅವಮಾನಗಳಿಂದ ಹತಾಶರಾಗಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯ ಕಡೆ ಮುಖ ಮಾಡದೆ, ಪುಸ್ತಕಗಳ ಅಧ್ಯಯನದ ಮೂಲಕ ಪರಿಹಾರ ಕಂಡುಕೊಳ್ಳಿ.

ಮನಸ್ಸಿನ ಭಾವನೆಗಳನ್ನು ಮಾತು, ಅಕ್ಷರಗಳ ರೂಪದಲ್ಲಿ ಹೊರಹಾಕಬೇಕು. ಹಾಗೆ ಮಾಡದೆ ಮೌನವಾಗಿದ್ದರೆ ಅದು ಹೃದಯಕ್ಕೆ ಸಮಸ್ಯೆ ಆಗಬಹುದು. ಸಮಾಜದಲ್ಲಿ ಹೇಳಿಕೊಳ್ಳಲು ಆಗದ ಪ್ರಕರಣಗಳು ಮಾನಸಿಕ ಚಿಂತನೆಗೆ ಕಾರಣವಾಗುತ್ತದೆ. ಸುಪ್ತಮನಸ್ಸಿನ ಚಿಕಿತ್ಸೆ ನೀಡಿದಾಗ ಒಳಗಿನ ಭಾವನೆ ಹೊರಬರುತ್ತೆ. ಸ್ಥಿರವಾದ ಚಿಂತನೆ ಒಳಗೆ ಮಡುಗಟ್ಟದಂತೆ ನೋಡಿಕೊಳ್ಳವ ಬಗೆಯನ್ನು ವಿವರಿಸಿದರು.

ದಿ. ಗು.ಬಿ. ಗಂಗಾಧರಪ್ಪ ಅವರು ನೀಡಿರುವ ದಿ. ಜಿ. ಬಿ. ಲಲಿತ ದತ್ತಿಯ ಆಶಯದಂತೆ ವಚನ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ವಿಚಾರವಾಗಿ ಉಪನ್ಯಾಸಕಿ ಡಾ. ಅನ್ನಪೂರ್ಣ ಎಚ್. ಎಸ್. ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ಅನೇಕ ಪ್ರಕಾರಗಳಿವೆ. ಆದರೆ ವಚನ ಸಾಹಿತ್ಯ ವಿಶ್ವದ ಬೇರೆ ಯಾವ ದೇಶ, ಭಾಷೆಯಲ್ಲಿ ಇಲ್ಲದ ಪ್ರಕಾರ ವಚನ ಸಾಹಿತ್ಯ ಎಂದರು.

ವಚನ ಸಾಹಿತ್ಯ ಒಂದು ದೊಡ್ಡ ಕ್ರಾಂತಿ ಎಬ್ಬಿಸಿತು. ಆರ್ಥಿಕ, ಧಾರ್ಮಿಕ, ರಾಜಕೀಯ, ಸಾಮಾಜಿಕ ಸಮಾನತೆ ಸಾಧಿಸಲು ನೆರವಾಯಿತು. ವೃತ್ತಿ ಮಾಡಬೇಕು, ಕಾಯಕವೇ ಕೈಲಾಸವಾಗಬೇಕು. ದಾಸೋಹ ಕಲ್ಪನೆ, ಗಂಡು, ಹೆಣ್ಣು ಜಾತಿ, ಧರ್ಮ ಮೌಢ್ಯವನ್ನು ದೂರಮಾಡಿ ಬದುಕುವುದು ಕಲಿಸಿದ್ದನ್ನು ವಿವರಿಸಿದರು.

        ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ. ಮಂಜುನಾಥ ದೀಪ ಬೆಳಗಿಸಿ ಉದ್ಘಾಟಿಸಿದರು. ಮೈತ್ರಿ ಕಾಲೇಜು ಪ್ರಾಂಶುಪಾಲರಾದ ಡಾ.ಜೆ. ಶಾಲಿನಿ ಅಧ್ಯಕ್ಷತೆ ವಹಿಸಿದ್ದರು. ಚೈತ್ರಾ ಸ್ವಾಗತಿಸಿ, ಪ್ರತಿಮಾ ನಿರೂಪಿಸಿ, ದಿವ್ಯಶ್ರೀ ವಂದಿಸಿದರು.

Exit mobile version