ಸಾಗರ : ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೇಸ್ ವತಿಯಿಂದ ಕಾಂಗ್ರೇಸ್ ಕಚೇರಿ ಎದುರು ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು.
ನಗರಸಭೆ ವಿಪಕ್ಷ ನಾಯಕ ಮಂಡಗಳಲೆ ಗಣಪತಿ ಮಾತನಾಡಿ, ರಾಜ್ಯದ ೨೪ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕಾರ ಮಾಡಿರುವುದು ರಾಜ್ಯದ ಜನತೆಗೆ ಅತೀವ ಸಂತೋಷವನ್ನುಂಟು ಮಾಡಿದೆ. ಇದರ ಜೊತೆಗೆ ರಾಜ್ಯದಾದ್ಯಂತ ಕಾಂಗ್ರೇಸ್ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದ ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇಬ್ಬರೂ ನಾಯಕರು ಕಾಂಗ್ರೇಸ್ ಪಕ್ಷವನ್ನು ರಾಜ್ಯದಲ್ಲಿ ಸದೃಢಗೊಳಿಸುವ ಜೊತೆಗೆ ಜನಪರವಾದ ಆಡಳಿತ ನೀಡುತ್ತಾರೆ ಎನ್ನುವ ವಿಶ್ವಾಸ ಜನರಿಗೆ ಇದೆ. ಪಕ್ಷ ನೀಡಿದ ಗ್ಯಾರೆಂಟಿಯನ್ನು ಇನ್ನು ಕೆಲವೆ ದಿನಗಳಲ್ಲಿ ಅನುಷ್ಟಾನಕ್ಕೆ ಬರಲಿದೆ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷೆ ಜ್ಯೋತಿ ಕೋವಿ ಮಾತನಾಡಿ, ರಾಜ್ಯದಲ್ಲಿ ಬಡವರ, ಅಲ್ಪಸಂಖ್ಯಾತರ, ದೀನದಲಿತರ, ಹಿಂದುಳಿದವರ ಪರವಾದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕಾಂಗ್ರೇಸ್ ಸರ್ಕಾರ ತನ್ನ ಗ್ಯಾರೆಂಟಿ ಕಾರ್ಡ್‌ನಲ್ಲಿ ಮಹಿಳೆಯರಿಗೆ ವಿಶೇಷ ಸೌಲಭ್ಯಗಳನ್ನು ಘೋಷಣೆ ಮಾಡಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೇಸ್ ಬೆಂಬಲಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜ್ಯವು ಸರ್ವಾಂಗೀಣ ಪ್ರಗತಿ ಸಾಧಿಸಲಿದೆ ಎಂದು ಹೇಳಿದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ಶಂಕರ್ ಮಾತನಾಡಿ, ಕಾಂಗ್ರೇಸ್ ಪಕ್ಷ ನುಡಿದಂತೆ ನಡೆಯುತ್ತದೆ. ಕೊಟ್ಟಿರುವ ಭರವಸೆಯನ್ನು ಖಂಡಿತಾ ಈಡೇರಿಸುವ ಮೂಲಕ ಜನರ ವಿಶ್ವಾಸ ಉಳಿಸಿಕೊಳ್ಳಲಿದೆ. ಬಿಜೆಪಿ ಕೊಟ್ಟ ಮಾತಿಗೆ ತಪ್ಪುವ ಪಕ್ಷ ಎನ್ನುವುದು ಜನರಿಗೆ ಗೊತ್ತಿದೆ. ಕಾಂಗ್ರೇಸ್ ಅವಧಿಯಲ್ಲಿ ಸಾಮಾಜಿಕ ನ್ಯಾಯದ ಜೊತೆಗೆ ಎಲ್ಲ ವರ್ಗದ ಹಿತರಕ್ಷಣೆ ಸಾಧ್ಯ ಎಂದು ಅಭಿಪ್ರಾಯಿಸಿದರು.
ನಗರ ಬ್ಲಾಕ್ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಮಧುಮಾಲತಿ, ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಮಹಾಬಲ ಕೌತಿ, ಪ್ರಮುಖರಾದ ಅನ್ವರ್ ಭಾಷಾ, ರವಿಕುಮಾರ್, ನಿತ್ಯಾನಂದ ಶೆಟ್ಟಿ, ಯಶವಂತ ಪಣಿ, ಗಣಾಧೀಶ್, ಕೃಷ್ಣಮೂರ್ತಿ, ತಬರೇಜ್, ಸದ್ದಾಂ, ನಾರಾಯಣ ಅರಮನೆಕೇರಿ, ಶ್ರೀಕಾಂತ ಕುರುವರಿ, ದುರ್ಗಪ್ಪ ಕೆಳದಿ, ತನ್ವೀರ್, ಕಿರಣ್ ದೊಡ್ಮನೆ ಇನ್ನಿತರರು ಹಾಜರಿದ್ದರು. (ಫೋಟೋ-ಕಾಂಗ್ರೇಸ್)