ಶಿವಮೊಗ್ಗ : ವೈಯುಕ್ತಿಕ ಅಭಿವೃದ್ಧಿಯ ಜೊತೆಗೆ ಸಮಾಜದ ಉನ್ನತಿಗಾಗಿ ಬೆಳಗುವ ಬೆಳಕು ನೀವಾಗಿ ಎಂದು ಚಲನಚಿತ್ರ ನಟ ಪೃಥ್ವಿ ಅಂಬರ್ ಕಿವಿಮಾತು ಹೇಳಿದರು.
ಶುಕ್ರವಾರ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ವತಿಯಿಂದ ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವ ‘ಉತ್ಥಾನ-2023’ ಉದ್ಘಾಟಿಸಿ ಮಾತನಾಡಿದರು.
ನಾವು ಎಷ್ಟೇ ಅಭಿವೃದ್ಧಿ ಹೊಂದಿದರು, ನಮ್ಮ ನಡುವೆ ಇರುವ ಕುಟುಂಬ, ಸಮಾಜದೊಂದಿಗೆ ಪ್ರೀತಿಯಿಂದ ವರ್ತಿಸಿ. ಪ್ರೀತಿ ತುಂಬಿದ ಸಮಾಜವಿಲ್ಲದೇ ಹೋದಾಗ ಬದುಕು ವ್ಯರ್ಥವಾದಂತೆ ಭಾಸವಾಗುತ್ತದೆ ಎಂದು ಹೇಳಿದರು.
ಎನ್ಇಎಸ್ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಮಾತನಾಡಿ, ಸಮಾಜವನ್ನು ನಿಮ್ಮೊಂದಿಗೆ ತೆಗೆದುಕೊಂಡು ಸಾಗಿ. ಜೀವನ ಪ್ರತಿ ಹಂತದ ನಿರ್ವಹಣೆಯು, ಸೃಜನಶೀಲ ಆತ್ಮವಿಶ್ವಾಸದೊಂದಿಗೆ ಉತ್ಥಾನದಿಂದ ಕೂಡಿರಲಿ. ಸಂಭ್ರಮದೊಂದಿಗೆ ಬದುಕಿನ ಮಹತ್ವ ಅರಿತು ಮುನ್ನಡೆಯಿರಿ ಎಂದು ಆಶಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್, ಖಜಾಂಚಿಗಳಾದ ಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಕುಲಸಚಿವರಾದ ಪ್ರೊ.ಎನ್.ಕೆ.ಹರಿಯಪ್ಪ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಎಂಬಿಎ ವಿಭಾಗದ ನಿರ್ದೇಶಕರಾದ ಡಾ.ಶ್ರೀಕಾಂತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕೋತ್ಸವ, ಗಾನೋತ್ಸವ, ಚಿತ್ರೋತ್ಸವ, ಪ್ರಶ್ನೋತ್ಸವ, ಮಂಥನೋತ್ಸವ, ನೃತ್ಯೋತ್ಸವ, ಪಂಥೋತ್ಸವ, ವಸ್ತ್ರೋತ್ಸವ, ನಾವೀನ್ಯೋತ್ಸವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 26 ಕಾಲೇಜುಗಳ 600 ಕ್ಕು ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.