ಸಾಗರ,ಅ.18 :
ಸಿಗಂದೂರು ಕ್ಷೇತ್ರದ ಎಲ್ಲ ವಿವರಗಳನ್ನು ಸಂಗ್ರಹಿಸಿದ್ದು, ಪ್ರಾಥಮಿಕ ಹಂತದ ಮಾಹಿತಿಯನ್ನು ಪಡೆಯಲಾಗಿದೆ. ಉಪವಿಭಾಗಾಧಿಕಾರಿಗಳು ಇನ್ನೊಮ್ಮೆ ಸ್ಥಳ ಪರಿಶೀಲನೆ ನಡೆಸಿ ಸಮಗ್ರ ಮಾಹಿತಿಯನ್ನು ನೀಡಲಿದ್ದು, ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶಿವಕುಮಾರ್ ಕೆ.ಬಿ. ತಿಳಿಸಿದ್ದಾರೆ.
ತಾಲ್ಲೂಕಿನ ಸಿಗಂದೂರು ಕ್ಷೇತ್ರದಲ್ಲಿ ಶುಕ್ರವಾರ ಹೊಡೆದಾಟ ಹಾಗೂ ಅಹಿತಕರ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಸಿಗಂದೂರು ದೇವಸ್ಥಾನ ರಾಜ್ಯದಲ್ಲಿಯೆ ಪ್ರಸಿದ್ದ ಪಡೆದಿದೆ. ಇಲ್ಲಿನ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಬಾರದು ಎನ್ನುವ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತೆ ಕೈಗೊಳ್ಳಲಾಗುತ್ತದೆ ಎಂದರು.
ಗುರುವಾರ ಮತ್ತು ಶುಕ್ರವಾರ ದೇವಸ್ಥಾನದಲ್ಲಿ ನಡೆದ ಘಟನೆಗಳು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಬರುವ ಭಕ್ತರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಉಪವಿಭಾಗಾಧಿಕಾರಿಗಳಿಗೆ ದೇವಸ್ಥಾನದ ಆಸ್ತಿ, ಆರ್ಥಿಕತೆ ಇನ್ನಿತರೆ ಬಗ್ಗೆ ವಿವರ ಸಂಗ್ರಹಿಸಲು ಸೂಚನೆ ನೀಡಲಾಗಿದೆ. ದೇವಸ್ಥಾನದ ಪ್ರಧಾನ ಅರ್ಚಕರು ಮತ್ತು ಧರ್ಮದರ್ಶಿಗಳನ್ನು ಪ್ರತ್ಯೇಕವಾಗಿ ಕರೆದು ಸಮಸ್ಯೆ ಕುರಿತು ಅರಿತುಕೊಳ್ಳುವ ಪ್ರಯತ್ನ ನಡೆಸಿದ್ದೇನೆ. ಅವರಿಬ್ಬರೂ ತಮ್ಮ ಸಮಸ್ಯೆ ತಿಳಿಸಿದ್ದಾರೆ ಎಂದು ಹೇಳಿದರು.
ಇಲ್ಲಿನ ಪೂರ್ಣ ಮಾಹಿತಿ ಸಿಗುವುದು ಸ್ವಲ್ಪ ತಡವಾಗಬಹುದು. ಪೂರ್ಣ ವರದಿ ನಂತರ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುತ್ತದೆ. ಸರ್ಕಾರದ ಆದೇಶ ಬಂದ ನಂತರ ಮುಂದೆ ಯಾವ ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆ ಗಮನ ಹರಿಸಲಾಗುತ್ತದೆ. ಅಲ್ಲಿಯವರೆಗೆ ಬರುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಶಾಂತಕುಮಾರ್, ಉಪವಿಭಾಗಾಧಿಕಾರಿ ಡಾ. ನಾಗರಾಜ್ ಎಲ್., ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಡಿವೈಎಸ್‌ಪಿ ವಿನಾಯಕ ಎನ್. ಶೆಟಿಗೇರ್ ಇನ್ನಿತರರು ಹಾಜರಿದ್ದರು.