ಶಿವಮೊಗ್ಗ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣವನ್ನು ಉದ್ಯಮವಾಗಿಸುತ್ತಿರುವ ಈ ಹೊತ್ತಿನಲ್ಲಿ ಮೈಸೂರು ಸಂಸ್ಥಾನದ ಮಹಾರಾಜರ ಚಿಂತನೆಗಳು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಬೇಕಿದೆ ಎಂದು ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಅಭಿಪ್ರಾಯಪಟ್ಟರು.
ನಗರದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮೇ. ೧೬ ರಂದು ಕನ್ನಡ ಸಾಹಿತ್ಯ ಪರಿಷತ್ತು 108 ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ನಾಡು, ನುಡಿಯ ಪ್ರೇಮಕ್ಕೆ ಕನ್ನಡ ಪ್ರಜ್ಞೆ ನಮ್ಮಲ್ಲಿರಬೇಕು. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಮಹಾರಾಜರು 1915 ರಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ಆರಂಭಿಸುತ್ತಾರೆ. ಕನ್ನಡದ ನೆಲದ ಧ್ವನಿಯಲ್ಲಿ, ಆಳುವ ಇಂಗ್ಲಿಷ್ ಮಂದಿಗೆ ತಿಳಿಸುವ ಉದ್ದೇಶದಿಂದ ಆಂಗ್ಲ ಭಾಷೆಯಲ್ಲಿ ಆಮಂತ್ರಣ ಮುದ್ರಣ ವಾಗುತ್ತೆ. ಮೊದಲ ಉದ್ಘಾಟನಾ ಭಾಷಣವೂ ಆಂಗ್ಲ ಭಾಷೆಯಲ್ಲಿತ್ತು ಎಂದು ಸಾಹಿತಿ ಡಾ. ಶುಭಾ ಮರವಂತೆ ವಿವರಿಸಿದರು.
ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜೇಶ್ವರಿ ಮಾತನಾಡಿ, ವಿದ್ಯಾರ್ಥಿಗಳು ಜೆರಾಕ್ಸ್ ನೋಟ್ಸ್, ಮೊಬೈಲ್ ಅಧ್ಯಯನ ಬಿಟ್ಟು ಪುಸ್ತಕ ಅಧ್ಯಯನ ಶೀಲರಾಗಬೇಕು. ಬರವಣಿಗೆ, ಓದು ವಿದ್ಯಾರ್ಥಿಗಳಿಗೆ ಕ್ರಿಯಾಶೀಲತೆ ತರುತ್ತೆ ಎಂದು ವಿವರಿಸಿದರು.
ತಾಲ್ಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಎಸ್. ಎಂ. ಮುತ್ತಯ್ಯ ಅವರು ಸ್ವಾಗತಿಸಿದರು. ಚಂದ್ರಕಲಾ ಪ್ರಾರ್ಥನೆ ಹಾಡಿದರು. ಶ್ವೇತ ಮತ್ತು ತಂಡ ನಾಡಗೀತೆ ಹಾಡಿದರು. ಶ್ರೇಯಾ ನಿರೂಪಿಸಿದರು. ಐಶ್ವರ್ಯ ವಂದಿಸಿದರು. ಡಿ. ಗಣೇಶ್, ಎಸ್. ನಾರಾಯಣ, ರಾಮಪ್ಪ ಗೌಡರು, ಡಾ. ನಾಗಾರ್ಜುನ, ಡಾ. ಜಿ.ಕೆ. ಪ್ರೇಮಾ, ಶಿವಣ್ಣ ಮೊದಲಾದವರು ಉಪಸ್ಥಿತರಿದ್ದರು.