Site icon TUNGATARANGA

ಶಿವಮೊಗ್ಗ ಗ್ರಾಮಾಂತರ/ ಜಿಜೆಪಿ ಸೋಲಿಗೆ ರಾಷ್ಟ್ರೀಯ ಪಕ್ಷದ ಒಳ ಒಪ್ಪಂದವೇ ಕಾರಣ/ ಕಾರ್ಯಕರ್ತರಿಗೆ ಸಾಥ್ ನೀಡಿ ಅಭಿನಂಧಿಸಿದ ಅಶೋಕ್ ನಾಯ್ಕ್

ಶಿವಮೊಗ್ಗ,ಮೇ.15:

ಈ ಬಾರಿಯ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಬಿಜೆಪಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಒಳ ಒಪ್ಪಂದದಿಂದ ಸೋಲಬೇಕಾಯಿತು. ನಮಗೆ ಈ ಬಾರೀ ಹೆಚ್ಚಿನ ಮತ ಬಂದಿವೆ. ಸೋಲಲು ರಾಷ್ಟ್ರೀಯ ಪಕ್ಷದ ಒಳ ಒಪ್ಪಂದವೇ ಕಾರಣ.ನನ್ನ ಸೋಲಿನಿಂದ ಕಾರ್ಯಕರ್ತರು ಧೃತಿಗೆಡಬಾರದು. ತಪ್ಪುಗಳನ್ನು ಸರಿಪಡಿಸಿಕೊಂಡು ಮತ್ತೆ ಗೆಲ್ಲೋಣ ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಕೆ.ಬಿ. ಅಶೋಕ ನಾಯ್ಕ ಹೇಳಿದರು.


ಅವರು ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜಕಾರಣದಲ್ಲಿ ಸೋಲು ಗೆಲುವು ಸಹಜ. ಸೋತಾಗ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಸೋಲಲು ಅನೇಕ ಕಾರಣಗಳಿವೆ. ವಿರೋಧ ಪಕ್ಷಗಳು ಒಳ ಮೀಸಲಾತಿ ವಿಷಯದಲ್ಲಿ ಸಲ್ಲದ ಆರೋಪಗಳನ್ನು ಮಾಡಿದರು. ಸುಳ್ಳು ಮಾಹಿತಿ ನೀಡಿದರು. ಮುಗ್ಧ ಸಮಾಜದ ಮತದಾರರು ಇದನ್ನು ನಿಜವೆಂದು ನಂಬಿಕೊಂಡರು. ಹಾಗಾಗಿ ಸೋಲಬೇಕಾಯಿತು. ಆದರೂ ಕೂಡ ಕಳೆದ ವರ್ಷಕ್ಕಿಂತ ಹೆಚ್ಚು ಮತವನ್ನು ಪಡೆದಿದ್ದೇನೆ. ಇಂತಹ ಸುಳ್ಳು ಆರೋಪ ಹುಟ್ಟಿಸಿದ್ದು ಜೆಡಿಎಸ್ ಎಂದು ಆರೋಪಿಸಿದರು.


ಕಾರ್ಯಕರ್ತರು ನನಗಾಗಿ ಹಗಲು ರಾತ್ರಿ ಶ್ರಮ ಪಟ್ಟಿದ್ದಾರೆ. ದುಡಿದಿದ್ದಾರೆ. ಇದು ನನ್ನ ಸೋಲೇ ಹೊರತು ಕಾರ್ಯಕರ್ತರ ಸೋಲಲ್ಲ. ಅವರೆಲ್ಲರಿಗೂ ಅಭಿನಂದನೆಗಳು. ನನಗೆ ಮತ ನೀಡಿದ ಮತದಾರರಿಗೆ ಕೃತಜ್ಞತೆ ಎಂದರು.
ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಒಳ ಒಪ್ಪಂದದಿಂದ ನಾನು ಸೋಲಬೇಕಾಯಿತು, ಜೊತೆಗೆ ನಮ್ಮ ಪಕ್ಷದವರೇ ಕೆಲವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಅಂತವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ. ಅವರು ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.


ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದವರು ನನ್ನ ಮೇಲೆ ಸಲ್ಲದ ಆರೋಪ ಮಾಡಿದರು. ಆ ವಿಚಾರದಲ್ಲಿ ನಾನು ಈಗಲೂ ಬದ್ಧನಾಗಿದ್ದೇನೆ. ನನ್ನ ವಿರೋಧಿಸಿದವರು ಈಗ ಮೀಸಲಾತಿಯನ್ನು ಸರಿಪಡಿಸಿಕೊಳ್ಳಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶಿವರಾಜ್, ರತ್ನಾಕರ ಶೆಣೈ, ಜಗದೀಶ್, ಮಂಜುನಾಥ್, ಗೋಪಿ ಇದ್ದರು.

Exit mobile version