ಶಿವಮೊಗ್ಗ: ನಾನು ಸೋತೆನೆಂದು ಶಿವಮೊಗ್ಗದ ಮತದಾರರು ಧೃತಿಗೆಡುವುದು ಬೇಡ. ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಎಲ್ಲಾ ಭರವಸೆಗಳನ್ನು ಶಿವಮೊಗ್ಗದ ಜನರಿಗೆ ತಲುಪಿಸುವಲ್ಲಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಸೋಲಿನಿಂದ ವಿಚಲಿತನಾಗುವುದಿಲ್ಲ. ೬೭ ಸಾವಿರ ಮತದಾರರ ಪ್ರೀತಿ ಗಳಿಸಿದ್ದೇನೆ. ಅವರ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಯೋಗೇಶ್ ಹೇಳಿದರು.
ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನನ್ನ ಸೋಲಿಗೆ ನಾನೇ ಕಾರಣ. ಯಾರ ಮೇಲೆಯೂ ತಪ್ಪು ಹೊರಿಸಲಾರೆ. ಎಲ್ಲೋ ಒಂದ ಕಡೆ ಜನರ ಪ್ರೀತಿ ಗಳಿಸುವಲ್ಲಿ ನಾನು ಸೋತಿದ್ದೇನೆ ಎನಿಸುತ್ತಿದೆ.
ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಿಕೊಳ್ಳಲಾಗುವುದು. ಶಿವಮೊಗ್ಗದ ಜನರು ನನಗೆ ಮತ ನೀಡಿ ಹೃದಯ ವೈಶಾಲ್ಯ ತೋರಿದ್ದಾರೆ. ಅವರೆಲ್ಲರಿಗೂ ನನ್ನ ಅಭಿನಂದನೆ. ಸರ್ಕಾರದ ಸವಲತ್ತುಗಳನ್ನು ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ, ನೂತನವಾಗಿ ಆಯ್ಕೆಯಾಗಿರುವ ಶಿವಮೊಗ್ಗ ನಗರದ ಶಾಸಕರು ಕೂಡ ನಮ್ಮ ಜೊತೆಗಿರುತ್ತಾರೆ. ನಾವು ಅವರ ಜೊತೆಗಿರುತ್ತೇವೆ. ಎಲ್ಲರೂ ಸೇರಿ ಅಭಿವೃದ್ಧಿ ಮಾಡೋಣ. ಶಾಂತಿಯನ್ನು ಕಾಪಾಡೋಣ ಎಂದರು.
ಇಷ್ಟರ ನಡುವೆ ಪಕ್ಷ ಬಿಟ್ಟು ಹೋದವರ ಬಗ್ಗೆ ನಮಗೆ ಅನುಕಂಪವಿಲ್ಲ. ಕಾಂಗ್ರೆಸ್ ಪಕ್ಷದ ಜೊತೆಗಿದ್ದು, ಇಲ್ಲಿಯ ಅಧಿಕಾರಗಳನ್ನು ಅನುಭವಿಸಿ ಕೊನೆಯ ಸಮಯದಲ್ಲಿ ಕೈಕೊಟ್ಟು ಹೋದವರ ಜೊತೆ ಹೇಗೆ ಒಂದಾಗುವುದು. ಈ ಬಗ್ಗೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಲ್. ಸತ್ಯನಾರಾಯಣ ರಾವ್, ವಿಶ್ವನಾಥ ಕಾಶಿ, ಸಿ.ಎಸ್. ಚಂದ್ರಭೂಪಾಲ್, ಆಸೀಫ್, ಕಲೀಂ ಪಾಶಾ, ರೇಖಾ ರಂಗನಾಥ್ ಮತ್ತಿತರರು ಇದ್ದರು.