Site icon TUNGATARANGA

ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಮಾಜಿ ಮುಖ್ಯಮಂತ್ರಿ ಬಿ.ಎಸ್.ವೈ ವಿರುದ್ದ ಮಾಡಿರುವ ಆರೋಪವೇನು ?

ಶಿವಮೊಗ್ಗ: ಬಿಜೆಪಿಯವರು ಬಿ.ಎಸ್. ಯಡಿಯೂರಪ್ಪ ಅವರನ್ನು ಚುನಾವಣೆಗೋಸ್ಕರ ಜಾತಿಯ ನಾಯಕನನ್ನಾಗಿ ಮಾಡಿದ್ದು, ವಿಷಾದನೀಯ ಎಂದು ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು.


ಅವರು ಇಂದು ತಮ್ಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿ.ಎಸ್ ಯಡಿಯೂರಪ್ಪನವರು ಒಬ್ಬ ಹೋರಾಟಗಾರರು. ಜನನಾಯಕರು. ಅಂತಹ ವ್ಯಕ್ತಿಯನ್ನು ಚುನಾವಣೆಗಾಗಿ ಬಿಜೆಪಿಯವರು ವೀರಶೈವ ಲಿಂಗಾಯತರ ಹೆಸರಿನಲ್ಲಿ ಜಾತಿಯ ನಾಯಕನನ್ನಾಗಿ ರೂಪಿಸಿದ್ದಾರೆ. ಅವರ ಕೈಯಲ್ಲಿ ಪತ್ರ ಬರೆಯಿಸಿ ಲಿಂಗಾಯತ ಅಭ್ಯರ್ಥಿಗೆ ಮತ ಕೊಡುವಂತೆ ಮನವಿ ಮಾಡಿಸಿದ್ದಾರೆ. ಇದು ಅತ್ಯಂತ ದುರದೃಷ್ಟಕರವಾದುದು ಎಂದರು.


ಚುನಾವಣೆ ಮುಗಿದಿದೆ. ಶಾಂತಿಯುತವಾಗಿ ನಡೆದಿದೆ. ಇದಕ್ಕೆ ಕಾರಣರಾದ ಪಕ್ಷದ ಮುಖಂಡರು, ಕಾರ್ಯಕರ್ತರು, ಜಿಲ್ಲಾಡಳಿತ, ಚುನಾವಣಾ ಆಯೋಗ, ಪೊಲೀಸ್ ಇಲಾಖೆ, ಮುಖ್ಯವಾಗಿ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದರು.


ನಾನು ಮತ್ತು ನಮ್ಮ ತಂಡ ಎಂದಿನಂತೆ ಶಾಂತಿ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಮತ ಕೇಳಿದೆವು. ಆದರೆ ಬಿಜೆಪಿಯವರು ಧರ್ಮ, ಜಾತಿ, ಹಣದ ಮೇಲೆ ಮತ ಕೇಳಿದ್ದಾರೆ. ಕಾಂಗ್ರೆಸ್ ಕೂಡ ಜಾತಿ, ಉಪಜಾತಿಗಳ ಸಭೆ ನಡೆಸಿ ಹಣ ಖರ್ಚು ಮಾಡಿ ಮತ ಕೇಳಿದೆ. ಬಿಜೆಪಿಯವರು ಪ್ರತಿ ಬೂತ್‌ಗಳಲ್ಲಿ ಬಜರಂಗಿ ಫೋಟೊ ಹಾಕಿ, ಕೇಸರಿ ಶಾಲು ಹೊದ್ದು, ಗೋಪೂಜೆ ಹೆಸರಲ್ಲಿ ಮತ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಅಭಿವೃದ್ಧಿ ಮತ್ತು ಮುಂದಿನ ಯೋಜನೆಗಳ ಬಗ್ಗೆ ಎರಡೂ ಪಕ್ಷಗಳು ಮಾತಾಡಿಲ್ಲ. ಹಾಗಾಗಿ ನನ್ನ ಗೆಲುವು ಖಚಿತ ಎಂದರು.


ಶಿವಮೊಗ್ಗದ ಎಲ್ಲ ೩೨ ವಾರ್ಡುಗಳಲ್ಲಿ ನಾವು ಮತ ಪಡೆಯುತ್ತೇವೆ ವಿಶೇಷವಾಗಿ ೧೪ ವಾರ್ಡುಗಳಲ್ಲಿ ಅಲ್ಪಸಂಖ್ಯಾತರು ಹೆಚ್ಚಿದ್ದಾರೆ. ಹಾಗೆಯೇ ಐದಾರು ವಾರ್ಡುಗಳಲ್ಲಿ ತ್ರಿಕೋನ ಸ್ಪರ್ಧೆ ಇದ್ದು, ೧೪ ವಾರ್ಡುಗಳಲ್ಲಿ ಬಿಜೆಪಿ ಮತ ಪಡೆಯುವುದಿಲ್ಲ. ಕಾಂಗ್ರೆಸ್ ಕೂಡ ಅನೇಕ ವಾರ್ಡುಗಳಲ್ಲಿ ಮತ ಪಡೆಯಲಾರದು. ಒಟ್ಟಾರೆ ಲೆಕ್ಕಾಚಾರದ ಆಧಾರದ ಮೇಲೆ ಮತದಾರರು ಜೆಡಿಎಸ್‌ಗೆ ಬೆಂಬಲ ನೀಡಿದ್ದಾರೆ ಎಂದರು.


ರಾಜ್ಯದಲ್ಲಿಯೂ ಸಹ ಸಮೀಕ್ಷೆಗಳು ಹೇಳುವ ಅಭಿಪ್ರಾಯದಂತೆ ಜೆಡಿಎಸ್ ಪಕ್ಷ ಆಡಳಿತ ನಡೆಸುವುದು ಖಚಿತವಾಗಿದೆ. ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರುವುದಿಲ್ಲ. ಅತಂತ್ರ ಪರಿಸ್ಥಿತಿ ಉಂಟಾಗಲಿದೆ. ಜೆಡಿಎಸ್ ಬೆಂಬಲವಿಲ್ಲದೆ ಯಾವುದೇ ಪಕ್ಷ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮುಖಂಡರಾದ ವೈ.ಹೆಚ್. ನಾಗರಾಜ್, ದೀಪಕ್ ಸಿಂಗ್, ಸತ್ಯನಾರಾಯಣ, ಐಡಿಯಲ್ ಗೋಪಿ, ಎಂ.ಪಿ. ಸಂಪತ್, ಶಿ.ಜು. ಪಾಶಾ ಮುಂತಾದವರಿದ್ದರು.

Exit mobile version