Site icon TUNGATARANGA

ಪೋನಿನ ಕಿರಿಕಿರಿ…!

ಬರೀ ಒಂದು ಫೋನ್ ಮಾಡೋಕೆ ಏನೆಲ್ಲಾ ಸರ್ಕಸ್ ಮಾಡ್ಬೇಕು ಮಾರ್ರೇ ಕರ್ಮ!! ಗೆಳೆಯನೊಬ್ಬನಿಗೆ ಕಾಲ್ ಮಾಡೋಣ ಅಂತ ಫೋನ್ ಕೈಗೆತ್ತಿಕೊಂಡೆ…

*ಮೊದಲ ಪ್ರಯತ್ನ: ಬ್ಯಾಂಕಿಂಗ್ ವಂಚನೆಯಿಂದ ನಿಮ್ಮನ್ನು ರಕ್ಷಿಸಿ, Airtel ಮೊಬೈಲಲ್ಲಿ OTP ಶೇರ್ ಮಾಡುವಾಗ ಎಚ್ಚರದಿಂದಿರಿ..

*ಎರಡನೇ ಪ್ರಯತ್ನ: ಕೊವಿಡ್ 19 ವಿರುದ್ಧ ದೇಶವೇ ಹೋರಾಡುತ್ತಿದೆ, ನೆನಪಿಡಿ ನಾವು ರೋಗದ ವಿರುದ್ಧ ಹೋರಾಡಬೇಕೇ ಹೊರತು ರೋಗಿಯ ವಿರುದ್ದ ಅಲ್ಲ!

*ಮೂರನೇ ಪ್ರಯತ್ನ: ನಮಸ್ಕಾರ, ಕೊವಿಡ್ 19 ಅನ್ ಲಾಕ್ ಪ್ರಕ್ರಿಯೆ ದೇಶದಾದ್ಯಂತ ಜಾರಿಯಲ್ಲಿದೆ, ನೆನಪಿಡಿ ಅಗತ್ಯ ಇದ್ರೆ ಮಾತ್ರ ಮನೆಯಿಂದ ಹೊರ ಬನ್ನಿ‌, ಹೊರಬರುವಾಗ ಮಾಸ್ಕ್ ಧರಿಸಲು ಮರೆಯದಿರಿ

*ನಾಲ್ಕನೇ ಪ್ರಯತ್ನ: ಕೆಮ್ಮು ಶೀತ ನೆಗಡಿಯ ಲಕ್ಷಣಗಳು ಕಂಡು ಬಂದರೆ ಫ್ರೀ ಹೆಲ್ಪ್ ಲೈನ್ ನಂಬರ್144410ಗೆ ಕರೆಮಾಡಿ, ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜನಹಿತಕ್ಕಾಗಿ ಜಾರಿ.

*ಐದನೇ ಪ್ರಯತ್ನ: ನಿಮ್ಮ ಮಕ್ಕಳಲ್ಲಿ ಜಂತುಹುಳು ಸಮಸ್ಯೆಯೇ? ರಕ್ತಹೀನತೆ ಅಪೌಷ್ಟಿಕತೆ ಹಸಿವು ಆಗದಿರುವುದು ನಿಶ್ಯಕ್ತಿ ಹೊಟ್ಟೆನೋವು ಮುಂತಾದವುಗಳು ಜಂತು ಹುಳುವಿನ ಸೋಂಕಿನಿಂದ ಕಂಡುಬರುತ್ತದೆ. ಈ ಜಂತುಹುಳ ನಿವಾರಣೆಗೆ ಅಲ್ಪೆಂಡೊಜೊಲ್ ಮಾತ್ರೆಯನ್ನು ಮಕ್ಕಳಿಗೆ ನುಂಗಿಸುವುದರ ಮೂಲಕ ತಡೆಗಟ್ಟಬಹುದು.

*ಆರನೇ ಪ್ರಯತ್ನ: ನಮಸ್ಕಾರ ನಿಮ್ಮ ಏರ್ ಟೆಲ್ ಸಂಖ್ಯೆಯ ಔಟ್ ಗೋಯಿಂಗ್ ಸೇವೆ ಇನ್ನೆರಡು ದಿನದಲ್ಲಿ ಮುಕ್ತಾಯವಾಗಲಿದೆ. ತಕ್ಷಣ ರೀಚಾರ್ಜ್ ಮಾಡಿಸಿ.

ಇವರ ಬೊಜ್ಜ! ಈ ಸಂಭ್ರಮಕ್ಕೆ ಕಾಲ್ ಮಾಡೋ ಬದಲು ಗೆಳೆಯನ ಮನೆಗೆ ಹೋಗಿ ‘ಲೇ ಸಂಜೆ ಮಸಾಲಪುರಿ ತಿನ್ನೋಕೆ ಹೋಗೋನಾ ರೆಡಿ ಆಗಿರು ಅಂತ’ ಹೇಳಬಹುದಿತ್ತು ಅಲ್ವೇ?

ಕೈಯಲ್ಲಿ ಮೊಬೈಲ್ ಫೋನ್ ಇರೋದು ಯಾಕೆ? ಮೂಲಭೂತ ಉದ್ದೇಶ “ತಕ್ಷಣಕ್ಕೆ ಯಾರನ್ನಾದರೂ ಕರೆ ಮಾಡಿ ಸಂಪರ್ಕಿಸಲು”, ಹೌದು ತಾನೆ? ಹೀಗಿರುವಾಗ ಅರ್ಜೆಂಟಿನಲ್ಲಿ ಯಾರಿಗಾದರೂ ಕರೆ ಮಾಡಿದಾಗ
1) ಜಂತುಹುಳ ಬಾಧೆ
2) ಬ್ಯಾಂಕಿಂಗ್ ವಂಚನೆ
3) ದೇಶ ಅನ್ಲಾಕ್ ಆಗುವುದು
4) ಏರ್ಟೆಲ್ ಥ್ಯಾಂಕ್ಸ್ ಆ್ಯಪ್ ಹೊಗಳಿಕೆ…

ಇಷ್ಟು ವಿಷಯಗಳನ್ನು ಅನಿವಾರ್ಯ ಕರ್ಮದಂತೆ ಕೇಳಿಸಿಕೊಳ್ಳಲೇ ಬೇಕು. “ತಾನು ಇಲ್ಲಿ ಪ್ರಾಣ ಸಂಕಟದಲ್ಲಿದ್ದೇನೆ, ಯಾರಾದರೂ ಕಾಪಾಡಿ…” ಅಂತ ಕರೆ ಮಾಡುವವನು ಕೂಡಾ ಇವನ್ನೆಲ್ಲ ಕೇಳಿಸಿಕೊಳ್ಳಲೇ ಬೇಕು. ಅಷ್ಟಾಗಿಯೂ ಇವರ ಸಂದೇಶ ಮುಗಿದ ಬಳಿಕ ಬಹಳಷ್ಟು ಸಲ ಕರೆ ಕಟ್ ಆಗುರುತ್ತದೆ, ಕೆಲವೊಮ್ಮೆ ನಾವು ಯಾಕೆ ಕರೆ ಮಾಡಲು ಹೊರಟಿದ್ದೇವೆ ಅನ್ನುವುದೇ ಮರೆತು ಹೋಗಿಯೂ ಹೋಗಬಹುದು!

ಯಾತಕ್ಕಾಗಿ ಇಷ್ಟು ಬಲಾತ್ಕಾರದಿಂದ ಸಂದೇಶಗಳನ್ನು “ಹೇರುತ್ತೀರಿ”? ತುರ್ತು ಸಂಪರ್ಕದ ಕರೆಗಾಗಿಯೇ ಇರುವ ಮೊಬೈಲ್ ಫೋನಿನ ಮೂಲಕವೂ ತಕ್ಷಣಕ್ಕೆ ಕರೆ ಸ‌ಂಪರ್ಕ ಆಗದಿದ್ದರೆ ಇಂಥ ಆಧುನಿಕ ವ್ಯವಸ್ಥೆಗಳು ಇರುವುದಾದರೂ ಯಾಕೆ?? ಇವರ ಕಿರಿಕಿರಿಗೆ ಮಾಸ್ಕ್ ಧರಿಸುವರು ಕೂಡ ತೆಗ್ದು ಕೋಪದಲ್ಲಿ ಬಿಸಾಡಿ ಬಿಟ್ಟಾರು. ಈ ಸಂದೇಶ ಕೇಳಿಕೇಳಿಯೇ ಜಂತು ಹುಳು ಸತ್ತೆ ಹೊದೀತು…..

ಸಂಗ್ರಹ ಬರಹ

Exit mobile version