ಶಿವಮೊಗ್ಗ: ಚುನಾವಣೆ ಎಂಬುದು ಯುದ್ಧ ಅಲ್ಲ. ಅದೊಂದು ಸ್ಪರ್ಧೆ ಅಷ್ಟೇ. ನಾನು ಯಾವ ಪಕ್ಷದ ಪರವಾಗಿಯೂ ಇಲ್ಲ. ಆದರೆ ಕೆಲವು ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಬಂದಿದ್ದೇನೆ. ನಾನು ಎಲ್ಲರನ್ನೂ ಗೌರವಿಸುತ್ತೇನೆ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವರುಣಾ ಕ್ಷೇತ್ರದಲ್ಲಿ ನಾನು ಪ್ರಚಾರ ನಡೆಸಿದ್ದಕ್ಕೆ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಮತ್ತು ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿ,
ಇಲ್ಲಿ ಅಸಮಾಧಾನ ವ್ಯಕ್ತಪಡಿಸುವುದೇನಿದೆ? ಪುನೀತ್ ಆಸ್ಪತ್ರೆ ನಿರ್ಮಿಸಿರುವುದು ಗೊತ್ತು. ಆದರೆ, ಪುನೀತ್ ಹೆಸರಲ್ಲಿ ಸೇವೆ ಮಾಡುವ
ವರು ಅದನ್ನು ಹೇಳಿಕೊಳ್ಳುವುದಿಲ್ಲ. ಇನ್ನೊಬ್ಬರ ಮಾತನಾಡುವಾಗ ಸ್ವಲ್ಪ ಯೋಚಿಸಬೇಕಿತ್ತು ಎಂದು ತಿರುಗೇಟು ನೀಡಿದರು.
ಸೋಮಣ್ಣ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವುದೇ ನನಗೆ ಗೊತ್ತಿರಲಿಲ್ಲ. ಅವರು ಹಾಗೂ ಪ್ರತಾಪ್ ಸಿಂಹ ಅವರು ನನಗೆ ಆಪ್ತರಾಗಿದ್ದಾರೆ. ಅವರ ಬಗ್ಗೆ ನನಗೆ ಗೌರವವಿದೆ. ಬಿಜೆಪಿಯವರು ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ. ಕರೆದರೆ ನಾನೂ ಹೋಗುತ್ತಿದ್ದೆ.
ನಟ ಸುದೀಪ್ ಕೂಡ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ನಾವಿಬ್ಬರೂ ಸ್ನೇಹಿತರೇ ಅಲ್ಲವೇ? ಪ್ರಚಾರ ಮಾಡುತ್ತಾರೆ ಎಂದು ಮಾತನಾಡಿಸಲು ಇರಲು ಸಾಧ್ಯವಾಗುತ್ತಾ? ನನಗೂ ೬೧ ವರ‍್ಷ. ನಾನೇನು ಚಿಕ್ಕ ಹುಡುಗನಾ ಎಂದರು.
ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಆಸೆ ನನಗೂ ಇತ್ತು. ಭಾರತ್ ಜೋಡೋ ಯಾತ್ರೆ ನಡೆಸಿದ್ದನ್ನು ನೋಡಿದ್ದೆ. ಅವರ ಫಿಟ್ ನೆಸ್ ನನಗಿಷ್ಟ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಂಗ್ರೇಸ್ ಅಭ್ಯರ್ಥಿಗಳಾದ ಬೆಳ್ತಂಗಡಿಯ ರಕ್ಷಿತ್ ಶಿವರಾಂ, ಶಿರಸಿಯ ಭೀಮಣ್ಣನಾಯ್ಕ್, ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಲಕ್ಷ್ಮೀಹೆಬ್ಬಾಳ್ಕರ್, ಬೀದರ್ ನ ಅಶೋಕ್ ಖೇಣಿ, ವಿಜಯಸಿಂಗ್, ದಿನೇಶ್ ಗುಂಡೂರಾವ್ ಅವರ ಪರವಾಗಿ ಪ್ರಚಾg ನಡೆಸುವುದಾಗಿ ತಿಳಿಸಿದರು.