ಶಿವಮೊಗ್ಗ, ಮೇ.೦3:
ಬಜರಂಗದಳದ ನಿಷೇಧದ ಮಾತನಾಡಿ ಜೇನುಗೂಡಿಗೆ ಕೈ ಹಾಕಿರುವ ಕಾಂಗ್ರೆಸ್ ರಾಜಕಾರಣ ಇನ್ನೂ ಮುಗಿಯಿತು. ಬಜರಂಗದಳ ಎಂಬುದು ಸಮಾಜಿಕ ಸಂಘಟನೆಯಾಗಿದ್ದು, ಹಿಂದು ಧರ್ಮದ ಸಿದ್ದಾಂತವನ್ನು ಎತ್ತಿ ಹಿಡಿಯುವ ರಾಷ್ಟ್ರೀಯ ಸಂಘಟನೆಯಾಗಿದೆ. ಇದು ಭಾರತ ಹಾಗೂ 56 ವಿದೇಶಗಳಲ್ಲಿ ನೆಲೆ ನಿಂತಿದೆ ಎಂದು ಬಜರಂಗದಳದ ವಿಭಾಗ ಸಂಯೋಜ ರಾಜೇಶ್‌ಗೌಡ ಹೇಳಿದರು.
ಅವರು ಇಂದು ಪತ್ರಿಕಾಗೊಷ್ಠಿಯಲ್ಲಿ ಮಾತನಾಡುತ್ತಾ, ಹಿಂದುಗಳ ಆರಾಧ್ಯಮೂರ್ತಿಯಾಗಿರುವ ಗೋ-ಮಾತೆಯನ್ನು ರಕ್ಷಿಸುವ ಬಜರಂಗದಳ ಲವ್ ಜಿಹಾದಿಯಂತಹ ಮಾನಸಿಕತೆಯಂತಹ ಭೂತದಿಂದ ತಾಯಂದಿರ ಮಾನ, ಪ್ರಾಣ ರಕ್ಷಣೆ ಮಾಡಿದ ಸಂಘಟನೆ. ಈ ಸಂಘಟನೆ ಬಗ್ಗೆ ಮಾತನಾಡಿದರೆ ರಾಜ್ಯದ ಮಾತೆಯರೇ ತಮಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಕೋವಿಡ್ ಹಂತದಲ್ಲಿ ಯಾವುದೇ ಮುಜುಗರ, ಹಿಂಜರಿಕೆಯಿಲ್ಲದೇ ಸಾವಿರಾರು ಶವಗಳನ್ನು ಅಂತ್ಯಸಂಸ್ಕಾರ ಮಾಡಿರುವ ಸಂಸ್ಥೆಯ ಬಗ್ಗೆ ಪ್ರನಾಳಿಕೆ ಮೂಲಕ ಜೇನು ಹಾಗೂ ಬೆಂಕಿಗೆ ಕೈ ಹಾಕುವ ಕೆಲಸ ಮಾಡಿದ್ದಾರೆ. ಇನ್ನು ಮುಂದೆ ಮತ ಕೇಳಲು ಹೋದರೆ ಮಹಿಳೆಯರೇ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಒಂದು ಮತದ ತುಷ್ಟಿಕರಣ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಪಿಎಫ್‌ಐ ಜೊತೆಗೆ ಬಜರಂಗದಳವನ್ನು ಹೋಲಿಕೆ ಮಾಡಲು ಮುಂದಾಗಿದೆ. ನಮ್ಮದು ಭಯೋತ್ಪಾದಕ ಸಂಘಟನೆಯಲ್ಲ. ರಾಷ್ಟ್ರೀಯತೆಯನ್ನು ಕಾಪಾಡುವ ಪಕ್ಷಕ್ಕೆ ತಮ್ಮ ಮತವಿರುತ್ತದೆ ಎಂದು ಬಿಜೆಪಿಗೆ ಮತ ನೀಡುವಂತೆ ಕೋರಿದರು.
ಸುದ್ದಿಗೋಷ್ಠಿಯಲ್ಲಿ ಸಹ ಸಂಚಾಲಕ ಅಂಕುಶ್, ನಗರ ಸಂಯೋಜಕ ನಾಗೇಶ್, ವೇಣು, ಅರ್ಜುನ್, ಲಿಖಿತ್, ಆನಂದ್ ಉಪಸ್ಥಿತರಿದ್ದರು.